ADVERTISEMENT

ಪೆಟ್ಟಿಗೆ ತುಂಬಾ ಪುಸ್ತಕ ಮೇಳ

ಜೆ.‍ಪಿ. ನಗರದಲ್ಲಿ ಇಂದಿನಿಂದ ‘ಲಾಕ್ ದಿ ಬಾಕ್ಸ್’ ಮೇಳ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 19:30 IST
Last Updated 11 ಜುಲೈ 2019, 19:30 IST
ಲಾಕ್ ದಿ ಬಾಕ್ಸ್
ಲಾಕ್ ದಿ ಬಾಕ್ಸ್   

ಒಂದು ಪೆಟ್ಟಿಗೆಯಲ್ಲಿ ಎಷ್ಟು ಪುಸ್ತಕಗಳನ್ನು ಇರಿಸಬಹುದು. ಪೆಟ್ಟಿಗೆಯ ಗಾತ್ರದ ಮೇಲೆ ಅದು ನಿರ್ಧಾರವಾಗುತ್ತದೆ. ಪೆಟ್ಟಿಗೆಗೆ ಒಂದು ನಿರ್ದಿಷ್ಟ ದರವನ್ನು ನಿಗದಿಪಡಿಸಿ ನಿಮಗಿಷ್ಟವಾದ ಪುಸ್ತಕಗಳನ್ನು ಅದರಲ್ಲಿ ತುಂಬಿಕೊಳ್ಳಿ ಎಂದರೆ ಹೇಗಿರುತ್ತೆ?

ಹೌದು, ಇಂತಹದೊಂದು ವಿನೂತನ ಪರಿಕಲ್ಪನೆಯೊಂದಿಗೆ‘ಲಾಕ್ ದಿ ಬಾಕ್ಸ್’ ಎಂಬ ಪುಸ್ತಕ ಮೇಳ ಸಾಹಿತ್ಯಾಸಕ್ತರನ್ನು ಸೆಳೆಯಲು ಸಜ್ಜಾಗಿದೆ. ಹಳೆಯ ಪುಸ್ತಕಗಳ ಆನ್‍ಲೈನ್ ಸ್ಟೋರ್ ’ಬುಕ್‍ಚೋರ್‘ ಜುಲೈ 12ರಿಂದ 21ರವರೆಗೆ ಜೆಪಿ ನಗರದ ಇಲಾನ್ ಕನ್ವೆನ್ಷನ್ ಹಾಲ್‍ನಲ್ಲಿ ಪುಸ್ತಕ ಮೇಳ ಆಯೋಜಿಸಿದೆ.ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಳಿಗೆಯಲ್ಲಿ ನಿಮ್ಮ ನೆಚ್ಚಿನ ಪುಸ್ತಕಗಳನ್ನು ಆಯ್ದುಕೊಳ್ಳಬಹುದು.

ಕೆ.ಜಿ. ತೂಕದಲ್ಲಿ ಅಥವಾ ರಿಯಾಯಿತಿ ದರದಲ್ಲಿ ಖರೀದಿ ಮಾಡುವುದನ್ನು ಈವರೆಗೆ ನೀವು ನೋಡಿರಬಹುದು. ಇಲ್ಲಿ ಇದ್ಯಾವುದೂ ಇರುವುದಿಲ್ಲ. ಬದಲಿಗೆ ಒಂದು ಬಾಕ್ಸ್‌ನಲ್ಲಿ ಎಷ್ಟು ಪುಸ್ತಕಗಳನ್ನು ತುಂಬಲು ಸಾಧ್ಯವೋ ಅಷ್ಟನ್ನು ತುಂಬಿ, ಒಂದೇ ಬಾರಿ ಹಣ ಪಾವತಿಸಿ ಖರೀದಿ ಮಾಡುವುದು ಇದರ ವಿಶೇಷತೆ. ಈ ಭಿನ್ನ ಮಾದರಿಯ ಮೇಳದಲ್ಲಿ ಲಕ್ಷಾಂತರ ಪುಸ್ತಕಗಳು ಏಕಕಾಲಕ್ಕೆ ಮಾರಾಟವಾಗಲಿವೆ.

ADVERTISEMENT

ಮೇಳದಲ್ಲಿ ಬೇರೆಬೇರೆ ಗಾತ್ರದ ಮೂರು ಪೆಟ್ಟಿಗೆಗಳಿವೆ. ಪುಸ್ತಕಗಳ ಸಂಖ್ಯೆ ಆಧರಿಸಿ ಯಾವ ಅಳತೆಯ ಬಾಕ್ಸ್ ಅಗತ್ಯ ಎಂದು ನಿರ್ಧರಿಸುವುದು ಗ್ರಾಹಕರ ವಿವೇಚನೆಗೆ ಬಿಟ್ಟ ಸಂಗತಿ. ’ಒಡಿಸ್ಯೂಸ್ ಬಾಕ್ಸ್’ಗೆ ₹999 ಬೆಲೆ ನಿಗದಿ ಮಾಡಲಾಗಿದ್ದು, ಇದರಲ್ಲಿ8ರಿಂದ 10 ಪುಸ್ತಕಗಳನ್ನು ತುಂಬಬಹುದು.’ಪಸ್ರ್ಯೂಸ್ ಬಾಕ್ಸ್‘ನ ಬೆಲೆ ₹1499. ಇದರಲ್ಲಿ 15ರಿಂದ 17 ಪುಸ್ತಕ ತುಂಬಿಸಿಕೊಳ್ಳಲು ಸಾಧ್ಯವಿದೆ. ಕೊನೆಯದ್ದು ‘ಹಕ್ರ್ಯುಲಸ್ ಬಾಕ್ಸ್’. ಇದರಲ್ಲಿ ಸುಮಾರು 30 ಪುಸ್ತಕಗಳನ್ನು ತುಂಬುವಷ್ಟು ಸ್ಥಳಾವಕಾಶವಿದ್ದು, ₹2499 ಬೆಲೆ ನಿಗದಿ ಮಾಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಾಹಿತ್ಯಿಕ ಆಟ, ಓದಿಗಾಗಿ ಸ್ಥಳಾವಕಾಶ, ರಸಪ್ರಶ್ನೆ, ಕವನ ವಾಚನ, ಆಹಾರ ಮಳಿಗೆ, ಹಳೆಯ ಪುಸ್ತಕ ಮಾರಾಟ ಮಳಿಗೆ, ಮಕ್ಕಳಿಗಾಗಿ ಚಿತ್ರಕಲೆ ಬಿಡಿಸುವ ಹಾಗೂ ಕತೆ ಹೇಳುವ ಸ್ಪರ್ಧೆಗಳಿವೆ. ಲೇಖಕರು ಹಾಗೂ ಕಲಾವಿದರಿಂದ ಕಾರ್ಯಾಗಾರ ನಡೆಯಲಿವೆ.16 ನಗರಗಳಲ್ಲಿ ಈ ಮೇಳೆ ನಡೆಯುತ್ತಿದೆ.

ಅವಧಿ: ಜುಲೈ 12ರಿಂದ 21ರವರೆಗೆ
ಸ್ಥಳ: ಇಲಾನ್ ಕನ್ವೆನ್ಷನ್ ಸೆಂಟರ್, #46, 7ನೇ ಹಂತ, ಕೊತ್ತನೂರು ಮುಖ್ಯರಸ್ತೆ, ಬ್ರಿಗೇಡ್ ಮಿಲೇನಿಯಂ ಮುಂಭಾಗ, ಪುಟ್ಟೇನಹಳ್ಳಿ, ಜೆಪಿ ನಗರ
ಸಮಯ: ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ
ಪ್ರವೇಶ: ಉಚಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.