ಬೆಂಗಳೂರು: ನಾಲ್ಕು ವರ್ಷಗಳಿಂದ ಕೋಮಾವಸ್ಥೆಯಲ್ಲಿದ್ದ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸಿದ್ದು, ಈ ಕೇಂದ್ರವನ್ನು ಮತ್ತೆ ಆರಂಭಿಸಲು ಶೀಘ್ರದಲ್ಲಿ ಹಸಿರು ನಿಶಾನೆ ನೀಡುವ ನಿರೀಕ್ಷೆಯಿದೆ.
ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧೀನದಲ್ಲಿರುವ ಈ ಕೇಂದ್ರದಲ್ಲಿ ₹ 2 ಕೋಟಿ ವೆಚ್ಚದಲ್ಲಿ ರನ್ ವೇ ಕಾಮಗಾರಿ ನಡೆಸಲಾಗಿದೆ. ಮೂರು ದಿನಗಳ ಹಿಂದೆ ಡಿಜಿಸಿಎ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
‘ಡಿಜಿಸಿಎ ಹಸಿರು ನಿಶಾನೆ ನೀಡಿದ ತಕ್ಷಣ ಉದ್ಘಾಟನೆಗೆ ದಿನ ನಿಗದಿಪಡಿಸಲಾಗುವುದು. ಈ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ತಿಳಿಸಿದ್ದಾರೆ.
ರನ್ ವೇಗೆ ಮೀಸಲಾಗಿದ್ದ ಜಾಗವನ್ನು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಬಿಟ್ಟುಕೊಡಲಾಗಿತ್ತು. ನಂತರ ಹೆಚ್ಚುವರಿ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಮೂಲ ಪ್ರಸ್ತಾವಿತ ಯೋಜನೆಯಂತೆ ರನ್ ವೇ ನಿರ್ಮಿಸಲಾಗಿದೆ. ಈ ಹೊಸ ರನ್ ವೇ 974 ಮೀಟರ್ ಉದ್ದವಿದೆ.
ಸ್ಥಗಿತಗೊಂಡಿದ್ದ ಈ ಕೇಂದ್ರವನ್ನು ಮತ್ತೆ ಆರಂಭಿಸಲು ಸಚಿವ ನಾರಾಯಣಗೌಡ ಆಸಕ್ತಿ ವಹಿಸಿ, ಕ್ರಮ ತೆಗೆದುಕೊಂಡಿದ್ದರು. ಪೈಲಟ್ ಆಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದರು. ಶೀಘ್ರದಲ್ಲೇ ಹೊಸ ತಂಡದ ದಾಖಲಾತಿಗೆ ಅಧಿಸೂಚನೆ ಹೊರಡಿಸಿ, ಡಿಸೆಂಬರ್‌ನಲ್ಲಿ ತರಗತಿಗಳನ್ನು ಆರಂಭಿಸಲು ಇಲಾಖೆ ಉದ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.