ADVERTISEMENT

‘ಜಾನಪದ ಜಾತ್ರೆ’ ಸಮಾರೋಪ ಇಂದು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 20:17 IST
Last Updated 9 ಏಪ್ರಿಲ್ 2022, 20:17 IST
‘ಜಾನಪದ ಜಾತ್ರೆ’ಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಕಂದಾಯ ಸಚಿವ ಆರ್.ಅಶೋಕ ಮತ್ತು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹೆಜ್ಜೆ ಹಾಕಿದರು
‘ಜಾನಪದ ಜಾತ್ರೆ’ಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಕಂದಾಯ ಸಚಿವ ಆರ್.ಅಶೋಕ ಮತ್ತು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹೆಜ್ಜೆ ಹಾಕಿದರು   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪದ್ಮನಾಭನಗರದ ಅಟಲ್‌ ಬಿಹಾರಿ ವಾಜಪೇಯಿ ರಂಗಮಂದಿರದಲ್ಲಿ ಆಯೋಜಿಸಿರುವ ‘ಜಾನಪದ ಜಾತ್ರೆ’ಯ ಅಂಗವಾಗಿ ಶನಿವಾರ ಜಾನಪದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ನಾಡಿನ ಪ್ರಸಿದ್ಧ ಕಲಾತಂಡಗಳು ಕಾರ್ಯಕ್ರಮ ಪ್ರಸ್ತುತ ಪಡಿಸಿದವು.

ಜಾನಪದ ಜಾತ್ರೆಯ ಸಮಾರೋಪ ಸಮಾರಂಭ ಏ.10ರ ಸಂಜೆ 6 ಗಂಟೆಗೆ ನೆರವೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವ ಆರ್‌.ಅಶೋಕ ಪಾಲ್ಗೊಳ್ಳಲಿದ್ದಾರೆ.

ಜಾನಪದ ಕಲಾವಿದರು ವಿಶೇಷ ಪ್ರದರ್ಶನ ನೀಡಲಿದ್ದಾರೆ. ಮಲೆಮಹದೇಶ್ವರರ ಹಾಡುಗಳು, ಮೈಸೂರಿನ ಚಂಡಿ ನಗಾರಿ, ಕೊಳ್ಳೇಗಾಲದ ನೀಲಗಾರರ ಪದ, ಸೋಲಿಗರ ಹಾಡು, ಮಂಗಳೂರಿನ ಕೋಲಾಟ, ವೀರಗಾಸೆ, ಜಗ್ಗಲಿಗೆ ಕುಣಿತದ ಮೂಲಕ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ADVERTISEMENT

ರಾಜ್ಯದ 17 ಜಾನಪದ ಕಲಾ ತಂಡಗಳ ಸುಮಾರು 250ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.ರಾಜ್ಯದ ವಿವಿಧ ಭಾಗಗಳ ಜನಪದ ಗಾಯಕರಿಂದ ವಿಶೇಷ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 300 ಕಲಾವಿದರು ಏಕಕಾಲದಲ್ಲೇ ವಿಶೇಷ ನೃತ್ಯ ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಮ ರಥಯಾತ್ರೆ ಇಂದು

ರಾಮನವಮಿ ಪ್ರಯುಕ್ತ ರಾಮ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪದ್ಮನಾಭನಗರದ ವಾಜಪೇಯಿ ಮೈದಾನದಲ್ಲಿ ಏ.10ರಂದು ಬೆಳಿಗ್ಗೆ ಶ್ರೀರಾಮನಿಗೆ ಪೂಜೆ ಸಲ್ಲಿಸುವ ಮೂಲಕ 10 ಗಂಟೆಗೆ ಚಾಲನೆ ನೀಡಲಾಗುತ್ತದೆ. ಮಂತ್ರಾಲಯದ ಸುಭುದೇಂದ್ರ ತೀರ್ಥ ಸ್ವಾಮೀಜಿ, ಕಾಗಿನೆಲೆಯ ಈಶ್ವರಾನಂದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ಯಾತ್ರೆಯಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಪದ್ಮನಾಭನಗರದ ಶಾಸಕರ ಕಚೇರಿವರೆಗೆ ಯಾತ್ರೆ ಸಾಗಲಿದೆ. ಮಧ್ಯಾಹ್ನ 1 ಗಂಟೆಗೆ ಪೂಜೆ, ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಯಾತ್ರೆಯುದ್ದಕ್ಕೂ ಪಾನಕ, ಮಜ್ಜಿಗೆ ವಿತರಣೆ ಇರಲಿದೆ.

ಎಲ್ಲರೂ ಶ್ವೇತವಸ್ತ್ರಧಾರಿಗಳಾಗಿ ಯಾತ್ರೆಯಲ್ಲಿ ಸಾಗಲಿದ್ದು, ಕಂದಾಯ ಸಚಿವ ಆರ್.ಅಶೋಕ ನೇತೃತ್ವ ವಹಿಸಲಿದ್ದಾರೆ. ಜಾನಪದ ಕಲಾವಿದರು ನೃತ್ಯ, ಹಾಡುಗಳಿಂದ ರಂಜಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.