ADVERTISEMENT

ಸಂಸ್ಕರಿಸಿದ ತ್ಯಾಜ್ಯ ನೀರಿನ ಗುಣಮಟ್ಟ ಪರೀಕ್ಷೆಗೆ ಸಮಿತಿ

ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 18:50 IST
Last Updated 19 ಅಕ್ಟೋಬರ್ 2019, 18:50 IST
(ಎಡಚಿತ್ರ)ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮುನಿತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜು, ಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣು, ಪ್ರೆಸ್ಟೀಜ್ ಟ್ರ್ಯಾಂಕ್ವಿಲಿಟಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ವಸತಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಜಿ. ಭಾಗವತ್ ಇದ್ದರು. (ಬಲಚಿತ್ರ) ಜನಸ್ಪಂದನದಲ್ಲಿ ಭಾಗವಹಿಸಿದ್ದ ನಿವಾಸಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು–ಪ್ರಜಾವಾಣಿ ಚಿತ್ರಗಳು
(ಎಡಚಿತ್ರ)ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮುನಿತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜು, ಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣು, ಪ್ರೆಸ್ಟೀಜ್ ಟ್ರ್ಯಾಂಕ್ವಿಲಿಟಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ವಸತಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಜಿ. ಭಾಗವತ್ ಇದ್ದರು. (ಬಲಚಿತ್ರ) ಜನಸ್ಪಂದನದಲ್ಲಿ ಭಾಗವಹಿಸಿದ್ದ ನಿವಾಸಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು–ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಸಂಸ್ಕರಿಸಿದ ತ್ಯಾಜ್ಯನೀರು ರಾಜಕಾಲುವೆಗೆ ಹರಿಸಲು ಯೋಗ್ಯವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚನೆ ಮಾಡುವಂತೆ ಶಾಸಕ ಅರವಿಂದ ಲಿಂಬಾವಳಿ ಅವರು ನಗರ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರೆಸ್ಟೀಜ್ ಟ್ರ್ಯಾಂಕ್ವಿಲಿಟಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ವಸತಿ ಮಾಲೀಕರ ಸಂಘದ ಸಹಯೋಗದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿನ ಕೊಳಚೆ ನೀರು ಸಂಸ್ಕರಣಾ ಘಟಕಗಳಲ್ಲಿ ಶುದ್ಧಿಯಾಗುವ ನೀರಿನ ಗುಣಮಟ್ಟ ಪರಿಶೀಲನೆ ಆಗದೆ ರಾಜಕಾಲುವೆಗೆ ಹರಿಸಲು ಅವಕಾಶ ಇಲ್ಲ. ಹೀಗಾಗಿ ಕೂಡಲೇ ಗುಣಮಟ್ಟ ಪರಿಶೀಲನೆಗೆ ತಜ್ಞರ ತಂಡ ರಚನೆ ಮಾಡುವ ಅಗತ್ಯ ಇದೆ’ ಎಂದು ಲಿಂಬಾವಳಿ ತಿಳಿಸಿದರು.

ADVERTISEMENT

ಈ ವಿಷಯ ಪ್ರಸ್ತಾಪಿಸಿದ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ ಕಿರಣ್‌, ‘ಗುಣಮಟ್ಟ ಪರಿಶೀಲನೆ ಆಗಿಲ್ಲ ಎಂಬ ಕಾರಣಕ್ಕೆ ಸಂಸ್ಕರಿಸಿದ ನೀರನ್ನು ಕಾಲುವೆಗಳಿಗೆ ಹರಿಸಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಮಳೆ ನೀರನ್ನಾದರೂ ರಾಜಕಾಲುವೆಗೆ ಸೇರಿಸಲು ಸಂಪರ್ಕ ಕಲ್ಪಿಸಿಕೊಡಿ’ ಎಂದು ಕೋರಿದರು.

‘38 ಎಕರೆ ಜಾಗದಲ್ಲಿ ಈ ಅಪಾರ್ಟ್‌ಮೆಂಟ್‌ ಸಮುಚ್ಚಯವಿದೆ. ಅಲ್ಲಿ ಬೀಳುವ ಮಳೆ ನೀರು ಎಲ್ಲಿ ಹೋಗಬೇಕು’ ಎಂದು ಅವರು ಪ್ರಶ್ನಿಸಿದರು. ರಾಜಕಾಲುವೆಗೆ ಸಂಪರ್ಕ ಕಲ್ಪಿಸಲು ಇರುವ ಅಡ್ಡಿಯನ್ನು ಸರಿಪಡಿಸುವಂತೆ ಕೋರಿದರು.

ತಿಂಗಳಲ್ಲಿ ಸರ್ವೆ: ಮಹದೇವಪುರ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಸರ್ವೆಯನ್ನು 1 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಭೂ ದಾಖಲೆಗಳ ಕಚೇರಿ ಅಧೀಕ್ಷಕ ಡೇವಿಡ್‌, ‘15 ದಿನಗಳಲ್ಲಿ ಸರ್ವೆ ಪೂರ್ಣಗೊಳಿಸುತ್ತೇವೆ’ ಎಂದರು. ‘15 ದಿನಗಳಲ್ಲಿ ಸರ್ವೆ ಮುಗಿಸಿದರೆ ಇದೇ ಜನರ ಮುಂದೆ ನಿಮ್ಮನ್ನು ಸನ್ಮಾನಿಸುತ್ತೇನೆ. ಆದರೆ, ಅದು ಅಷ್ಟು ಸುಲಭವಲ್ಲ. ಒಂದು ತಿಂಗಳ ಕಾಲಾವಕಾಶ ತೆಗೆದುಕೊಳ್ಳಿ. ಆದರೆ, ಈ ಗಡುವಿನಲ್ಲಿ ಕೆಲಸ ಮುಗಿಸಿ’ ಎಂದು ಅರವಿಂದ ಲಿಂಬಾವಳಿ ತಾಕೀತು ಮಾಡಿದರು.

ಒಳಚರಂಡಿ ವ್ಯವಸ್ಥೆ ಕಲ್ಪಿಸಿ
ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಕೊಳಚೆ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಅಸೋಸಿಯೇಷನ್‌ನ ಮಂಜುನಾಥ ಪಾಟೀಲ ಮನವಿ ಮಾಡಿದರು.

‘ಟ್ರ್ಯಾಂಕ್ವಿಲಿಟಿ ಮತ್ತು ಸುತ್ತಮುತ್ತ 5,300 ಫ್ಲ್ಯಾಟ್‌ಗಳಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಎಸ್‌ಟಿಪಿ ನೀರು ಹರಿಸಲು ಯಾವುದೇ ವ್ಯವಸ್ಥೆ ಇಲ್ಲ. ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು’ ಎಂದರು.

‘ಖಾತಾ ಶುಲ್ಕ, ಆಸ್ತಿ ತೆರಿಗೆ ಸೇರಿದಂತೆ ಗ್ರಾಮ ಪಂಚಾಯಿತಿಗೆ ಹೆಚ್ಚಿನ ತೆರಿಗೆಯನ್ನು ಇಲ್ಲಿನ ನಿವಾಸಿಗಳೇ ಪಾವತಿಸುತ್ತಿದ್ದೇವೆ. ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಬೇಕು. ಆವರಣದಲ್ಲಿ 8 ಕೊಳವೆ ಬಾವಿಗಳಿದ್ದು, ಅವುಗಳನ್ನು ಪಂಚಾಯಿತಿಯೇ ನಿರ್ವಹಿಸಿ ನಿರಂತರ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

15 ದಿನಗಳಲ್ಲಿ ಇ–ಖಾತಾ: ಗ್ರಾಮ ಪಂಚಾಯಿತಿ ಭರವಸೆ
‘ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳ ಫ್ಲ್ಯಾಟ್‌ಗಳಿಗೆ ಸಂಬಂಧಿಸಿದ ಬಾಕಿ ಇರುವ ಇ–ಖಾತಾಗಳನ್ನು ಇನ್ನು 15 ದಿನಗಳಲ್ಲಿ ಇದೇ ಸಭಾಂಗಣದಲ್ಲಿ ವಿತರಣೆ ಮಾಡಲಿದ್ದೇವೆ’ ಎಂದು ಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣು ಭರವಸೆ ನೀಡಿದರು.

‘ನಾನು ಅಧ್ಯಕ್ಷನಾಗಿ ನಾಲ್ಕು ತಿಂಗಳುಗಳಾಗಿವೆ. ಈ ಅವಧಿಯಲ್ಲಿ 350 ಇ–ಖಾತಾಗಳನ್ನು ವಿತರಣೆ ಮಾಡಿದ್ದೇನೆ. 81 ಮಂದಿಯ ಇ–ಖಾತಾ ಬಾಕಿ ಇದ್ದು, ಅವುಗಳಲ್ಲಿ 80 ಖಾತಾಗಳು ಸಿದ್ಧವಾಗಿವೆ. ತೆರಿಗೆ ಪಾವತಿಸಿ ಖಾತಾ ಪಡೆಯಬಹುದು’ ಎಂದು ಹೇಳಿದರು. ಇ–ಖಾತಾ ಪಡೆಯಲು ಶುಲ್ಕ ಪಾವತಿಸಿ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ಕಚೇರಿ ಸುತ್ತುತ್ತಿದ್ದೇನೆ. ಕೂಡಲೇ ಖಾತಾ ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಮಹೇಶ್ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜು, ‘ಇ–ಖಾತಾ ಪಡೆಯಲು ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ಎಡತಾಕಿ ಸುಸ್ತಾಗಿದ್ದಾರೆ. ವಿಳಂಬ ಮಾಡದೆ ವಿತರಣೆ ಮಾಡಿ’ ಎಂದು ಸಲಹೆ ನೀಡಿದರು.

ದೊಡ್ಡಬನಹಳ್ಳಿ ಬಳಿ ಕಸ ವಿಲೇವಾರಿ ಘಟಕ
ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಪರಿಹಾರಕ್ಕೆ ದೊಡ್ಡಬನಹಳ್ಳಿ ಬಳಿ ಕಸ ವಿಲೇವಾರಿ ಘಟಕಕ್ಕೆ ಜಮೀನು ಕಾಯ್ದಿರಿಸಲಾಗುವುದು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಕಸದ ಸಮಸ್ಯೆ ಬಗ್ಗೆ ನಿವಾಸಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಿಟಗಾನಹಳ್ಳಿ ಭೂಭರ್ತಿ ಘಟಕಕ್ಕೆ ಕಸ ಸುರಿಯುವಂತಿಲ್ಲ. ಸದ್ಯ ಕಸ ಸುರಿಯಲು ಯಾವ ವ್ಯವಸ್ಥೆ ಇದೆ’ ಎಂದು ಅಧಿಕಾರಿಗಳನ್ನು ಕೇಳಿದರು.

‘ಸದ್ಯ ಕಸ ಸುರಿಯಲು ಯಾವುದೇ ಸ್ಥಳ ಇಲ್ಲದೇ ತೊಂದರೆಯಾಗಿದೆ’ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣು ಹೇಳಿದರು. ‘ಸದ್ಯಕ್ಕೆ ದೊಡ್ಡಬನಹಳ್ಳಿ ಬಳಿಯ ಜಾಗ ಕಾಯ್ದಿರಿಸಲಾಗುತ್ತಿದೆ. ಈ ಜಾಗವನ್ನು ಬಳಸಿಕೊಳ್ಳಿ’ ಎಂದು ಶಾಸಕರು ಹೇಳಿದರು.

ನಾಳೆ ಸಿಎಂ ಸಭೆ: ಮಿಟಗಾನಹಳ್ಳಿ ಮತ್ತು ಮಂಡೂರು ಗ್ರಾಮಗಳ ಕಸ ವಿಲೇವಾರಿ ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಕರೆದಿದ್ದಾರೆ.

**
ಕಾಟಮ್‌ನಲ್ಲೂರು ಗೇಟ್ ಬಳಿ ಸಿಗ್ನಲ್ ವ್ಯವಸ್ಥೆ ಇಲ್ಲದೆ ಅಪಘಾತಗಳು ಸಂಭವಿಸಿ ಸಾವು ನೋವು ಸಂಭವಿಸುತ್ತಿವೆ. ಅಪಘಾತ ತಪ್ಪಿಸಲು ವ್ಯವಸ್ಥಿತ ಸಂಚಾರ ವ್ಯವಸ್ಥೆ ಕಲ್ಪಿಸಿ.
–ಗೀತಾ ಶ್ರೀನಿವಾಸ್‌, ಸ್ಥಳೀಯ ನಿವಾಸಿ

**
ಇ–ಖಾತಾ ಪಡೆಯಲು ಶುಲ್ಕ ಪಾವತಿಸಿ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ಕಚೇರಿ ಸುತ್ತುತ್ತಿದ್ದೇನೆ. ಕೂಡಲೇ ಖಾತಾ ವಿತರಣೆಗೆ ಕ್ರಮ ಕೈಗೊಳ್ಳಿ.
-ಮಹೇಶ್, ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ

**

ಟ್ರ್ಯಾಂಕ್ವಿಲಿಟಿ ಹಾಗೂ ಸುತ್ತಮುತ್ತಲ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸಿ ಗ್ರಾಮ ಪಂಚಾಯಿತಿಯೇ ನಿರ್ವಹಣೆ ಮಾಡಬೇಕು.
-ಕೆ.ಜಿ. ಭಾಗವತ್, ವಸತಿ ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.