ADVERTISEMENT

20ರಿಂದ ಜಪಾನ್‌ ಹಬ್ಬ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 21:48 IST
Last Updated 14 ಫೆಬ್ರುವರಿ 2021, 21:48 IST

ಬೆಂಗಳೂರು: ದಿ ಜಪಾನ್‌ ಫೌಂಡೇಷನ್‌, ಬೆಂಗಳೂರಿನಲ್ಲಿರುವ ಕಾನ್ಸುಲೇಟ್‌ ಜನರಲ್‌ ಆಫ್‌ ಜಪಾನ್‌, ಜಪಾನ್‌ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ, ಐಜೆಸಿಸಿಐ, ಐಇಇ–ಐಐಎಸ್‌ಸಿ, ಜೆಟ್ರೊ ಹಾಗೂ ಜಪಾನ್‌ ಸಂಸ್ಥೆಯ ಸಹಯೋಗದಲ್ಲಿ ಜಪಾನ್‌ ಹಬ್ಬದ 17ನೇ ಆವೃತ್ತಿಗೆ ಇದೇ 20ರಂದು ಚಾಲನೆ ಸಿಗಲಿದೆ.

‘ಈ ತಿಂಗಳ ಎರಡು ವಾರಾಂತ್ಯಗಳಲ್ಲಿ (ಫೆ.20, 21 ಮತ್ತು 27, 28) ಆನ್‌ಲೈನ್‌ನಲ್ಲಿ ಜಪಾನ್‌ ಹಬ್ಬ ನಡೆಯಲಿದೆ’ ಎಂದು ಬೆಂಗಳೂರಿನಲ್ಲಿರುವ ಜಪಾನ್‌ ಕಾನ್ಸುಲೇಟ್‌ ಜನರಲ್‌ನ ಅಧಿಕಾರಿ ಮಿಟಸುಹಿರೊ ಅಮಾವೊ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

‘ಭಾರತ ಮತ್ತು ಜಪಾನ್‌ ನಡುವಣ ಬಾಂಧವ್ಯ ಗಟ್ಟಿಗೊಳಿಸುವುದು, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ 2005ರಿಂದಲೂ ಈ ಹಬ್ಬವನ್ನು ಆಯೋಜಿಸುತ್ತಾ ಬಂದಿದ್ದೇವೆ’ ಎಂದರು.

ADVERTISEMENT

‘ಹಬ್ಬದ ಅಂಗವಾಗಿ ಜಪಾನ್‌ ಸ್ಕೂಲ್‌ ಕ್ವಿಜ್‌, ಜಪಾನ್‌ ಓಪನ್‌ ಕ್ವಿಜ್‌, ಜಪಾನ್‌ ಗೇಮ್‌ ನೈಟ್‌, ಮಿಜುಹಿಕಿ ಕರಕುಶಲ ಕಾರ್ಯಾಗಾರ, ಕರೊಕೆ ಗಾಯನ ಸ್ಪರ್ಧೆ, ತಸುಬಸಾ ಓದು ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ... ಹೀಗೆ ಇನ್ನಿತರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ವೆಬಿನಾರ್‌ನಲ್ಲಿ ಪಾಲ್ಗೊಳ್ಳಲು ಈಗಾಗಲೇ 800 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಪಾನ್‌ ಭಾಷೆಯ ಕಲಿಕೆಯ ವೆಬಿನಾರ್‌ ಕೂಡ ನಡೆಯಲಿದೆ’ ಎಂದು ಜಪಾನ್‌ ಹಬ್ಬ ಟ್ರಸ್ಟ್‌ನ ಅಧ್ಯಕ್ಷೆ ಎ.ಶ್ರೀವಿದ್ಯಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.