ADVERTISEMENT

ಐದು ತಿಂಗಳಲ್ಲಿ 62 ಮನೆ ದೋಚಿದ್ದ ‘ಜಪಾನ್’ ರಾಜ!

ಪೊಲೀಸರಿಗೆ ಸವಾಲಾಗಿರುವ ಕಳ್ಳ ಸೋದರರು

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:22 IST
Last Updated 14 ಮೇ 2019, 20:22 IST
ಜಪಾನ್‌ ರಾಜ ಬೀಗ ಒಡೆಯಲು ಬಳಸುತ್ತಿದ್ದ ಆಯುಧವನ್ನು ಕಮಿಷನರ್ ಟಿ.ಸುನೀಲ್‌ ಕುಮಾರ್‌ ತೋರಿಸಿದರು
ಜಪಾನ್‌ ರಾಜ ಬೀಗ ಒಡೆಯಲು ಬಳಸುತ್ತಿದ್ದ ಆಯುಧವನ್ನು ಕಮಿಷನರ್ ಟಿ.ಸುನೀಲ್‌ ಕುಮಾರ್‌ ತೋರಿಸಿದರು   

ಬೆಂಗಳೂರು: ಐದು ತಿಂಗಳಲ್ಲಿ 62 ಮನೆಗಳ ಬೀಗ ಒಡೆದು ನಗ–ನಾಣ್ಯ ದೋಚಿದ್ದ ಕುಖ್ಯಾತ ಕಳ್ಳ ರಾಜ ಅಲಿಯಾಸ್ ‘ಜಪಾನ್ ರಾಜ’ನ ಗ್ಯಾಂಗ್ ಕೆಂಪಾಪುರ ಅಗ್ರಹಾರ ಪೊಲೀಸರಿಗೆ ಸಿಕ್ಕಿಬಿದ್ದು ಮತ್ತೆ ಜೈಲು ಸೇರಿದೆ.

‘ಹುಳಿಮಾವು ಸಮೀಪದ ದೇವರಚಿಕ್ಕನಹಳ್ಳಿಯ ರಾಜ ಅಲಿಯಾಸ್ ಜಪಾನ್ (40), ಆತನ ಅಣ್ಣ ಗೋಪಿ (43) ಹಾಗೂ ಮಾಗಡಿ ರಸ್ತೆಯ ಡೇವಿಡ್ (34) ಎಂಬುವರನ್ನು ಬಂಧಿಸಿ, ₹ 35 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಜಪ್ತಿ ಮಾಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

2018ರ ನವೆಂಬರ್–ಡಿಸೆಂಬರ್‌ ನಡುವೆಯೇ 44 ಮನೆಗಳಲ್ಲಿ 4.75 ಕೆ.ಜಿ ಚಿನ್ನ ಕದ್ದಿದ್ದ ರಾಜ ಹಾಗೂ ಗೋಪಿ ಸೋದರರನ್ನು ಪೊಲೀಸರು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದರು. ಅಲ್ಲಿ ಅವರಿಗೆ ಡೇವಿಡ್‌ನ ಪರಿಚಯವಾಗಿತ್ತು. ಬಿಡುಗಡೆ ಬಳಿಕ ಒಟ್ಟಾಗಿ ಕಳ್ಳತನ ಮಾಡಲು ಸಂಚು ರೂಪಿಸಿಕೊಂಡ ಅವರು, ಅಂತೆಯೇ ಇದೇ ಫೆಬ್ರುವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ 18 ಮನೆಗಳಲ್ಲಿ ದೋಚಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಕುಳ್ಳಗಿದ್ದಿದ್ದಕ್ಕೆ ಜಪಾನ್ ಹೆಸರು: 15 ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರಾಜನಿಗೆ, ಕೆ.ಪಿ.ಅಗ್ರಹಾರದಲ್ಲಿ ಒಂಟಿಯಾಗಿ ನೆಲೆಸಿದ್ದ ನೀಲಮ್ಮ ಎಂಬುವರ ಪರಿಚಯವಾಗಿತ್ತು. 2007ರಲ್ಲಿ ಅವರು ಜೀವನ ನಿರ್ವಹಣೆಗಾಗಿ ಆಟೊ ಖರೀದಿಸಿ, ಅದನ್ನು ರಾಜನಿಗೆ ಬಾಡಿಗೆಗೆ ಕೊಟ್ಟಿದ್ದರು. ಆತ ಆಟೊ ಓಡಿಸಿಕೊಂಡು‌, ನಿತ್ಯ ಅವರಿಗೆ ಬಾಡಿಗೆ ಕಟ್ಟುತ್ತಿದ್ದ.

ರಾಜ ಬಾಡಿಗೆ ಓಡಿಸುತ್ತಲೇ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರೆ, ಗೋಪಿ ಹಾಗೂ ಡೇವಿಡ್ ಬೈಕ್‌ಗಳಲ್ಲಿ ಸಂಚರಿಸಿ ಮನೆಗಳನ್ನು ನೋಡುತ್ತಿದ್ದರು. ನಂತರ ರಾತ್ರಿ ವೇಳೆ ಕಬ್ಬಿಣದ ಸಲಾಕೆಯೊಂದಿಗೆ ಆ ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದರು. ಕದ್ದ ಮಾಲನ್ನು ನೀಲಮ್ಮ ಮೂಲಕ ಮಾರಾಟ ಮಾಡಿಸಿ, ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು. ಕುಳ್ಳಗಿದ್ದ ಕಾರಣಕ್ಕೆ ಆತನನ್ನು ಸ್ನೇಹಿತರು ‘ಜಪಾನ್ ರಾಜ’ ಎಂಬ ಅಡ್ಡ ಹೆಸರಿನಿಂದಲೇ ಕರೆಯುತ್ತಿದ್ದರು (ಆ ದೇಶದವರು ಹೆಚ್ಚು ಕುಳ್ಳರಿರುತ್ತಾರೆ) ಎಂದು ಪೊಲೀಸರು ಹೇಳಿದ್ದಾರೆ.

ಮನೆ ಗುರುತಿಸುವ ತಂತ್ರ: ಮನೆ ಮುಂದೆ ಕಸ ಬಿದ್ದಿದ್ದರೆ, ದಿನಪತ್ರಿಕೆಗಳು ಹಾಗೇ ಇದ್ದರೆ, ಸಂಜೆಯಾದರೂ ರಂಗೋಲಿ ಉಳಿದಿದ್ದರೆ, ರಾತ್ರಿ ವೇಳೆ ದೀಪ ಉರಿಯದಿದ್ದರೆ... ಆರೋಪಿಗಳು ಗಮನಿಸುತ್ತಿದ್ದರು. ಇಂತಹ ಹಲವು ಸೂಕ್ಷ್ಮತೆಗಳ ಆಧಾರದಲ್ಲಿ ಆ ಮನೆಯಲ್ಲಿ ಯಾರೂ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಿದ್ದರು. ಮಾಗಡಿ ರಸ್ತೆ, ಶೇಷಾದ್ರಿಪುರ, ಅನ್ನಪೂರ್ಣೇಶ್ವರಿನಗರ, ಅನುಗೊಂಡನಹಳ್ಳಿ, ಮಾಲೂರು ಸೇರಿದಂತೆ 9 ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು. ಎಲ್ಲ ಠಾಣೆಗಳ ಪೊಲೀಸರೂ ಇವರ ಬಂಧನಕ್ಕೆ ಬಲೆ ಬೀಸಿದ್ದರು.

ಪತ್ನಿಯರ ಬಳಿ ಆಭರಣ ಪತ್ತೆ

‘ಈಗ ಕಳವು ಮಾಡಿದ್ದ ಒಡವೆಗಳನ್ನು ಜಪಾನ್ ರಾಜ ಇನ್ನೂ ವಿಲೇವಾರಿ ಮಾಡಿರಲಿಲ್ಲ. ಆತನಿಗೆ ಜ್ಯೋತಿ ಹಾಗೂ ಪದ್ಮಾ ಎಂಬ ಇಬ್ಬರು ಪತ್ನಿಯರಿದ್ದೂ, ಎಲ್ಲ ಆಭರಣಗಳೂ ಅವರ ಬಳಿಯೇ ಇದ್ದವು’ ಎಂದು ಪೊಲೀಸರು ಮಾಹಿತಿ ನೀಡಿದರು.

ಇನ್ನಿಬ್ಬರು ಸೋದರರ ಸೆರೆ

ಮಂಜುನಾಥನಗರದ ‘ಸಿಲ್ವರ್ ಟೆಸ್ಟಿಂಗ್ ಲ್ಯಾಬ್ ಆ್ಯಂಡ್ ವರ್ಕ್ಸ್‌’ ಅಂಗಡಿಯಲ್ಲಿ 18 ಕೆ.ಜಿ ಅರಗು ಮಿಶ್ರಿತ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿದ್ದ ಕೆ.ಶ್ರೀಧರ್ ಹಾಗೂ ಸೇಂದಿಲ್ ಕುಮಾರ್ ಎಂಬ ಸೋದರರನ್ನೂ ಕೆಂಪಾಪುರ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋದರರು, ಮಾಲೀಕರಿಗೆ ಗೊತ್ತಾಗದಂತೆ 2018ರ ಡಿಸೆಂಬರ್‌ನಿಂದ 2019ರ ಮಾರ್ಚ್‌ ನಡುವೆ ಹಂತ ಹಂತವಾಗಿ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿದ್ದರು. ಲೆಕ್ಕ ಪರಿಶೋಧನೆ ವೇಳೆ ವ್ಯತ್ಯಾಸ ಕಂಡುಬಂದಿದ್ದರಿಂದ ಮಾಲೀಕರು ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ಎಲ್ಲ ನೌಕರರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸೋದರರು ಸಿಕ್ಕಿಬಿದ್ದಿದ್ದಾರೆ.

**

ಜಪಾನ್ ರಾಜ ಬೀಗ ಮೀಟುವುದಕ್ಕಾಗಿಯೇ ಕುಲುಮೆಯವರ ಬಳಿ ಆರ್ಡರ್ ಕೊಟ್ಟು ಆಯುಧ ಮಾಡಿಸಿಕೊಂಡಿದ್ದ. ಅದನ್ನು ಮಾಡಿಕೊಟ್ಟವನನ್ನೂ ಪತ್ತೆ ಮಾಡುತ್ತಿದ್ದೇವೆ
- ಟಿ.ಸುನೀಲ್ ಕುಮಾರ್,ಪೊಲೀಸ್ ಕಮಿಷನರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.