ಕಾರ್ಯಕ್ರಮದಲ್ಲಿ ಸುಶೀಲಾ ಸೋಮಶೇಖರ್ ಅವರಿಗೆ ‘ಜರಗನಹಳ್ಳಿ ಶಿವಶಂಕರ್ ಹನಿಗವನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಪುರುಷೋತ್ತಮರಾಜು, ಕನ್ನಡಪರ ಚಿಂತಕ ರಾ.ನಂ. ಚಂದ್ರಶೇಖರ್ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರು: ಕರ್ನಾಟಕ ವಿಕಾಸ ರಂಗವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಲೇಖಕಿ ಸುಶೀಲಾ ಸೋಮಶೇಖರ್ ಅವರಿಗೆ ‘ಜರಗನಹಳ್ಳಿ ಶಿವಶಂಕರ್ ಹನಿಗವನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ₹ 5 ಸಾವಿರ ನಗದು ಒಳಗೊಂಡಿದೆ. ಚುಟುಕು ಕವಿ ಜರಗನಹಳ್ಳಿ ಶಿವಶಂಕರ್ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಜಾನಪದ ವಿದ್ವಾಂಸ ಹಿ.ಚಿ.ಬೋರಲಿಂಗಯ್ಯ, ‘ಕವಿಯಾದವನಿಗೆ ಬರವಣಿಗೆ ಜತೆಗೆ ಅನುಭವವೂ ಮುಖ್ಯ. ಕೆಲ ಸಾಲುಗಳಲ್ಲಿಯೇ ವಿಶಾಲ ಅರ್ಥ ನೀಡುವುದು ಹನಿಗವನದ ವಿಶೇಷ. ಕವಿತೆಗಳು ನಮ್ಮ ಕಣ್ಣು ತೆರೆಸಿ, ಜೀವನಾನುಭವವನ್ನು ತೆರೆದಿಡುತ್ತವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಚುಟುಕು ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟವರು ಜರಗನಹಳ್ಳಿ ಶಿವಶಂಕರ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಶೀಲಾ ಸೋಮಶೇಖರ್, ‘ಜರಗನಹಳ್ಳಿ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಲಭಿಸಿರುವುದು ಸಂತೋಷವನ್ನುಂಟು ಮಾಡಿದೆ. ತವರುಮನೆಗೆ ಹೋದಾಗ ಅರಿಶಿಣ–ಕುಂಕುಮ ನೀಡುವಂತೆ, ಶಿವಶಂಕರ್ ಅವರು ಪುಸ್ತಕಗಳನ್ನು ನೀಡುತ್ತಿದ್ದರು’ ಎಂದು ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.