ADVERTISEMENT

ಉರುಳಲಿದೆ ಜಯದೇವ ಫ್ಲೈ ಓವರ್‌; ಏರಲಿದೆ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 19:32 IST
Last Updated 19 ಫೆಬ್ರುವರಿ 2019, 19:32 IST
ನಗರದ ಜಯದೇವ ಆಸ್ಪತ್ರೆ ಬಳಿ ಮೆಟ್ರೊ ಮಾರ್ಗಕ್ಕಾಗಿ ನೆಲಸಮವಾಗಲಿರುವ ಮೂರು ಹಂತದ ಮೇಲು ಸೇತುವೆ –ಪ್ರಜಾವಾಣಿ ಚಿತ್ರ
ನಗರದ ಜಯದೇವ ಆಸ್ಪತ್ರೆ ಬಳಿ ಮೆಟ್ರೊ ಮಾರ್ಗಕ್ಕಾಗಿ ನೆಲಸಮವಾಗಲಿರುವ ಮೂರು ಹಂತದ ಮೇಲು ಸೇತುವೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಯದೇವ ಫ್ಲೈ ಓವರ್‌ ಉರುಳಲು ದಿನಗಣನೆ ಆರಂಭವಾಗಿದೆ. ಫ್ಲೈಓವರ್‌ನ ನಾಲ್ಕೂ ಪಾರ್ಶ್ವಗಳಲ್ಲಿ ಮೆಟ್ರೊ ಪಿಲ್ಲರ್‌ ಕಾಮಗಾರಿ ಭರದಿಂದ ಸಾಗಿದೆ. ಜತೆಗೆ ಸಂಚಾರ ದಟ್ಟಣೆಯ ಸಮಸ್ಯೆಯೂ ಉಲ್ಬಣಿಸಿದೆ.

2.84 ಕಿ.ಮೀ. ಉದ್ದದ ಫ್ಲೈಓವರ್‌ ಸಿಲ್ಕ್‌ ಬೋರ್ಡ್‌ ರಸ್ತೆ – ಬನಶಂಕರಿ ಕಡೆಗಿನ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿತ್ತು. ಜಯದೇವ ಆಸ್ಪತ್ರೆ ನಿಲ್ದಾಣದ ಬಳಿ ದಟ್ಟಣೆ ಉಂಟಾಗುವುದನ್ನು ತಪ್ಪಿಸುತ್ತಿತ್ತು. 2006ರಲ್ಲಿ ಬಿಡಿಎ ಈ ಫ್ಲೈಓವರ್‌ ನಿರ್ಮಿಸಿತ್ತು. ಬನ್ನೇರುಘಟ್ಟ ದಾರಿಯಲ್ಲಿ ಬಿಟಿಎಂ ಲೇಔಟ್‌, ಜೆಪಿ ನಗರ ಪ್ರದೇಶಗಳಿಗೆ ಕೊಂಡಿಯಾಗಿತ್ತು. ಈಗಒಂದು ಪಾರ್ಶ್ವದ ಸಂಪರ್ಕರಸ್ತೆಯನ್ನು (ರ‍್ಯಾಂಪ್‌) ಅಗೆದು ಹಾಕಿ ಪಿಲ್ಲರ್‌ ನಿರ್ಮಾಣ ಆರಂಭವಾಗಿದೆ. ಮಾರ್ಚ್‌ ವೇಳೆಗೆ ಫ್ಲೈಓವರ್‌ ಒಡೆಯುವ ಕಾಮಗಾರಿ ಆರಂಭವಾಗಲಿದೆ ಎಂದು ಮೆಟ್ರೊ ಮೂಲಗಳು ಹೇಳಿವೆ.

₹ 21 ಕೋಟಿ ವೆಚ್ಚದಲ್ಲಿ ಫ್ಲೈಓವರ್‌ ನಿರ್ಮಿಸಿದ್ದ ಬಿಡಿಎ 2006ರಲ್ಲಿ ಇದನ್ನು ಸಂಚಾರಕ್ಕೆ ಮುಕ್ತಗೊಳಿಸಿತ್ತು. 11 ವರ್ಷಗಳ ಬಳಿಕ ಇದು ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಈ ಪ್ರದೇಶದಲ್ಲಿ ಗೊಟ್ಟಿಗೆರೆ– ನಾಗವಾರ (21.25 ಕಿ.ಮೀ.)ಮತ್ತು ಆರ್‌.ವಿ. ರಸ್ತೆ– ಬೊಮ್ಮಸಂದ್ರ (18.82 ಕಿ.ಮೀ.) ಮೆಟ್ರೊ ಮಾರ್ಗಗಳ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ.

ADVERTISEMENT

‘ಮೆಟ್ರೊ ಬರುವುದೇನೋ ಸರಿ. ಹಾಗೆಂದು ಹಾಲಿ ಸಾರಿಗೆ ವ್ಯವಸ್ಥೆಗೇನು ಪರ್ಯಾಯ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2006ರಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೇಲುಸೇತುವೆಯನ್ನು ಒಡೆದು ಹಾಕಲಾಗುತ್ತಿದೆ. ಸರಿ ಸುಮಾರು ಇದೇ ಅವಧಿಯಲ್ಲಿ ಮೆಟ್ರೊ ಅನುಷ್ಠಾನದ ಚಿಂತನೆ ನಡೆದಿತ್ತು. ಆಗ ಮುಂದಾಲೋಚನೆ ಇದ್ದಿದ್ದರೆ ಈ ಫ್ಲೈಓವರ್‌ ನಿರ್ಮಾಣವನ್ನೇ ತಡೆಯಬಹುದಿತ್ತು. ಈಗ ಒಡೆದು ಹಾಕುವುದೂ ದುಬಾರಿ ವೆಚ್ಚದ ಕೆಲಸ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಬೇಸರ ವ್ಯಕ್ತಪಡಿಸಿದರು.

‘ಸಿಲ್ಕ್ ಬೋರ್ಡ್‌ ನಂತರ ಅತಿ ಹೆಚ್ಚು ದಟ್ಟಣೆಯ ಪ್ರದೇಶ ಇದು. ಫ್ಲೈಓವರ್‌ ನೆಲಸಮವಾದ ಬಳಿಕ ಆಗಬಹುದಾದ ದಟ್ಟಣೆಯನ್ನು ಊಹಿಸಲೂ ಅಸಾಧ್ಯ. ಕನಿಷ್ಠ ಕಾಲಮಿತಿಯಲ್ಲಿ ಇಲ್ಲಿ ಮೆಟ್ರೊ ಕಾಮಗಾರಿ ಮುಗಿದು ಫ್ಲೈಓವರ್‌ಗೆ ಪರ್ಯಾಯ ರಸ್ತೆ ನಿರ್ಮಾಣಗೊಳ್ಳಬೇಕು’ ಎಂದು ಸ್ಥಳೀಯರಾದ ಮುಕುಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯದ ಸ್ಥಿತಿಯೇನು?: ‘ಫ್ಲೈಓವರ್‌ ಒಂದು ಪಾರ್ಶ್ವವನ್ನು ಬಂದ್‌ ಮಾಡಿರುವುದರಿಂದ ಜಯದೇವ ಆಸ್ಪತ್ರೆ ನಿಲ್ದಾಣದಿಂದ ಬಿಟಿಎಂ ಲೇಔಟ್‌ ಕಡೆಗೆ ತೆರಳಲು ತಿರುವು ಪಡೆಯಬೇಕಾದರೆ ಗೋಪಾಲನ್‌ ಇನ್ನೋವೇಷನ್‌ ಮಾಲ್‌ನಿಂದ ಸ್ವಲ್ಪ ಮುಂದಕ್ಕೆ ತೆರಳಿ ಆ ಕಟ್ಟಡದ ಹಿಂಭಾಗದಿಂದ ಹೋಗಬೇಕಾಗುತ್ತದೆ. ಅಥವಾ ಇಲ್ಲಿಯೇ ಯೂ ಟರ್ನ್‌ ಪಡೆಯಬಹುದು. ಮಾರೇನಹಳ್ಳಿ ರಸ್ತೆಯ ಪಾರ್ಶ್ವದಲ್ಲೂ ಇದೇ ರೀತಿ ಸಮಸ್ಯೆ ಇದೆ’ ಎಂದು ಕೆಲವು ಚಾಲಕರು ಹೇಳಿದರು.

ಲಾರಿಗಳ ಸಂಚಾರಕ್ಕೆ ತೀವ್ರ ನಿರ್ಬಂಧ ಹೇರಲಾಗಿದೆ. ಹೊರವರ್ತುಲ ರಸ್ತೆಗೆ ಈ ಮಾರ್ಗ ಸಂಪರ್ಕಿಸುತ್ತದೆ. ಆದರೆ, ಹಗಲು ವೇಳೆ ನಾವು ಮುಕ್ತವಾಗಿ ಸಂಚರಿಸುವುದೂ ಅಸಾಧ್ಯ ಎಂದು ಚಾಲಕ ರಹೀಮುಲ್ಲಾ ಹೇಳಿದರು.

**

ನಿಲ್ದಾಣವನ್ನೇ ತೆರವು ಮಾಡಿರುವುದರಿಂದ ಆಟೋ ರಿಕ್ಷಾಗಳು ಎಲ್ಲೆಲ್ಲೋ ನಿಲ್ಲಬೇಕಿದೆ. ಸಂಪಾದನೆಗೂ ಕುತ್ತು ಬಂದಿದೆ. ಈ ಕಾಮಗಾರಿ ಬೇಗನೆ ಮುಗಿಯಲಿ.
ಆನಂದ್‌, ಆಟೋರಿಕ್ಷಾ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.