ADVERTISEMENT

ಜಯದೇವ ಆಸ್ಪತ್ರೆ: 105 ಮಂದಿಗೆ ಸ್ಟೆಂಟ್‌ ಅಳವಡಿಕೆ

ಆರ್ಥಿಕವಾಗಿ ಹಿಂದುಳಿದ ಹೃದ್ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 16:26 IST
Last Updated 20 ಸೆಪ್ಟೆಂಬರ್ 2025, 16:26 IST
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಹೃದ್ರೋಗಿಗಳೊಂದಿಗೆ ಡಾ.ಬಿ. ದಿನೇಶ್, ಡಾ.ಗೋವಿಂದರಾಜು ಸುಬ್ರಮಣಿ, ಡಾ.ವಿ. ಪ್ರಭಾಕರ್, ಡಾ.ಎ.ಎಂ. ಜಗದೀಶ್, ಡಾ. ಭೂಪಾಲ್, ಜಿ.ಎ. ಅಡಗಟ್ಟಿ ಹಾಗೂ ಅವಿನಾಶ್ ಉಪಸ್ಥಿತರಿದ್ದರು
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಹೃದ್ರೋಗಿಗಳೊಂದಿಗೆ ಡಾ.ಬಿ. ದಿನೇಶ್, ಡಾ.ಗೋವಿಂದರಾಜು ಸುಬ್ರಮಣಿ, ಡಾ.ವಿ. ಪ್ರಭಾಕರ್, ಡಾ.ಎ.ಎಂ. ಜಗದೀಶ್, ಡಾ. ಭೂಪಾಲ್, ಜಿ.ಎ. ಅಡಗಟ್ಟಿ ಹಾಗೂ ಅವಿನಾಶ್ ಉಪಸ್ಥಿತರಿದ್ದರು   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ 105 ಹೃದ್ರೋಗಿಗಳಿಗೆ ಉಚಿತವಾಗಿ ಸ್ಟೆಂಟ್‌ ಅಳವಡಿಸಲಾಗಿದೆ. 

ಸಂಸ್ಥೆಯು ಅಮೆರಿಕದ ಮೆಡ್‌ಟ್ರಾನಿಕ್ಸ್ ಸಂಸ್ಥೆ ಮತ್ತು ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಸಹಯೋಗದಲ್ಲಿ ಈ ಕಾರ್ಯಾಗಾರ ಹಮ್ಮಿಕೊಂಡಿತ್ತು. ಇದೇ ತಿಂಗಳು 15ರಿಂದ‌ 17ರವರೆಗೆ ಸಂಸ್ಥೆಯ ಬೆಂಗಳೂರು ಹಾಗೂ ಮೈಸೂರು ಆಸ್ಪತ್ರೆಯಲ್ಲಿ ಈ ಕಾರ್ಯಾಗಾರ ನಡೆದಿದೆ. 

‘ರೈತರು, ದಿನಗೂಲಿ ನೌಕರರು, ಆಟೊ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ರಾಜ್ಯದ ಹೃದ್ರೋಗಿಗಳ ಜೊತೆಗೆ ಹೊರ ರಾಜ್ಯಗಳ ರೋಗಿಗಳೂ ಕಾರ್ಯಾಗಾರದಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಒಟ್ಟು 120 ಸ್ಟೆಂಟ್‌ಗಳನ್ನು ಅಳವಡಿಸಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದ್ದಾರೆ.

ADVERTISEMENT

‘ಜಯದೇವ ಆಸ್ಪತ್ರೆಯಲ್ಲಿ 15 ವರ್ಷಗಳಿಂದಲೂ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳನ್ನು ಆಯ್ಕೆ ಮಾಡಿ, ಉಚಿತವಾಗಿ ಸ್ಟೆಂಟ್ ಅಳವಡಿಕೆ ಮಾಡಲಾಗುತ್ತಿದೆ. ಅದೇ ರೀತಿ, ಈ ವರ್ಷವೂ ಯಶಸ್ವಿಯಾಗಿ 105 ಹೃದ್ರೋಗಿಗಳಿಗೆ ಉಚಿತವಾಗಿ ಸ್ಟೆಂಟ್ ಅಳವಡಿಕೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಎಷ್ಟೋ ಹೃದ್ರೋಗಿಗಳಿಗೆ ಆಂಜಿಯೋಗ್ರಾಂ ಪರೀಕ್ಷೆ ನಡೆಸಿದ ಬಳಿಕ ಸ್ಟೆಂಟ್ ಅಳವಡಿಕೆಗೆ ಶಿಫಾರಸು ಮಾಡಿದರೂ, ಹಣದ ಕೊರತೆಯಿಂದ ಸ್ಟೆಂಟ್ ಅಳವಡಿಕೆ ಮಾಡಿಕೊಳ್ಳಲು ನಿರಾಕರಿಸುತ್ತಾರೆ. ಆದ್ದರಿಂದ ರೋಗಿಗಳ ಆರ್ಥಿಕ ಪರಿಸ್ಥಿತಿ ಅವಲೋಕಿಸಿ, ಕೆಲವರಿಗೆ ಉಚಿತವಾಗಿ ಸ್ಟೆಂಟ್ ಅಳವಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಡಾ.ಜಿ. ಸುಬ್ರಮಣಿ ಅವರ ಸಹಕಾರದಿಂದ ಸ್ಟೆಂಟ್‌ ಅಳವಡಿಕೆ ಸಾಕಾರವಾಗುತ್ತಿದೆ. ಮುಂದಿನ ವರ್ಷವೂ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ನಡೆಯಲಿದ್ದು, ಆರ್ಥಿಕವಾಗಿ ಹಿಂದುಳಿದ ಹೃದ್ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ವಿವಿಧ ಅನಾರೋಗ್ಯ ಸಮಸ್ಯೆ

‘ಕಾರ್ಯಾಗಾರದಲ್ಲಿ ಭಾಗವಹಿಸಿದ ಹೃದ್ರೋಗಿಗಳಿಗೆ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ ವಿವಿಧ ಅನಾರೋಗ್ಯ ಸಮಸ್ಯೆಗಳು ಪತ್ತೆಯಾಗಿವೆ. ಕೆಲವರು ಮಧುಮೇಹ ಅಧಿಕ ರಕ್ತದೊತ್ತಡ ಸೇರಿ ಒಂದಕ್ಕೂ ಅಧಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವುದು ದೃಢಪಟ್ಟಿದೆ. ಶೇ 60 ರಷ್ಟು ರೋಗಿಗಳಲ್ಲಿ ಮಧುಮೇಹ ಶೇ 54 ರಷ್ಟು ಮಂದಿಯಲ್ಲಿ ಅಧಿಕ ರಕ್ತದೊತ್ತಡ ಶೇ 33 ರಷ್ಟು ಮಂದಿ ಧೂಮಪಾನಿಗಳು ಹಾಗೂ ಶೇ 35 ರಷ್ಟು ಮಂದಿ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿದವರಾಗಿದ್ದಾರೆ’ ಎಂದು ಡಾ.ಬಿ. ದಿನೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.