ADVERTISEMENT

ಜಯದೇವ: ಸಿರಿಯಾದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:45 IST
Last Updated 5 ಫೆಬ್ರುವರಿ 2026, 15:45 IST
ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಮಹಿಳೆಗೆ ಜಯದೇವ ಸಂಸ್ಥೆಯ ವೈದ್ಯರ ತಂಡ ಶುಭಹಾರೈಸಿತು
ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಮಹಿಳೆಗೆ ಜಯದೇವ ಸಂಸ್ಥೆಯ ವೈದ್ಯರ ತಂಡ ಶುಭಹಾರೈಸಿತು   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಿರಿಯಾದ 65 ವರ್ಷದ ಮಹಿಳೆಗೆ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ತೀವ್ರ ಎದೆನೋವು ಹಾಗೂ ಉಸಿರಾಟದ ಸಮಸ್ಯೆಯ ಕಾರಣ ಮಹಿಳೆಯು ಮೊದಲು ಶಿವಾಜಿನಗರದ ಚರಕ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದರು. ಆದರೆ, ಅಲ್ಲಿ ಹೆಚ್ಚಿನ ಸೌಲಭ್ಯ ಇರದ ಕಾರಣ, ಸರ್ಕಾರೇತರ ಸಂಸ್ಥೆಯಾದ ಆ್ಯಕ್ಟೀವ್ ಬೆಂಗಳೂರು ಫೌಂಡೇಷನ್‌ ನೆರವಿನಿಂದ ಜಯದೇವ ಹೃದ್ರೋಗ ಸಂಸ್ಥೆಗೆ ಸ್ಥಳಾಂತರಗೊಂಡರು.

‘ವೈದ್ಯಕೀಯ ಪರೀಕ್ಷೆಯಿಂದ ಮಹಿಳೆಯ ತ್ರಿವಳಿ ರಕ್ತನಾಳಗಳು ಬ್ಲಾಕ್ ಆಗಿರುವುದು, ಹೃದಯ ಬಡಿತದಲ್ಲಿ ತೀವ್ರ ವ್ಯತ್ಯಯ ಆಗಿರುವುದು ದೃಢಪಟ್ಟಿತು. ಪ್ರಯೋಗಾಲಯದ ವರದಿ ಪರಿಶೀಲಿಸಿದ ಸಂಸ್ಥೆಯ ತಜ್ಞರಾದ ಡಾ.ಎಲ್. ಶ್ರೀಧರ್ ಮತ್ತು ಡಾ.ನಟರಾಜ್ ಶೆಟ್ಟಿ, ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು. ಬಳಿಕೆ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ, ಶಸ್ತ್ರಚಿಕಿತ್ಸಕರಾದ ಡಾ.ಶಿಲ್ಪಾ ಸುರೇಶ್, ಡಾ.ಸಾದಿಕ್ ಷರೀಫ್ ಹಾಗೂ ಅರಿವಳಿಕೆ ತಜ್ಞ ಡಾ.ಸತೀಶ್ ಅವರನ್ನು ಒಳಗೊಂಡ ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು’ ಎಂದು ಸಂಸ್ಥೆ ವೈದ್ಯರು ತಿಳಿಸಿದರು.

ADVERTISEMENT

‘ರೋಗಿಯ ಹೃದಯ ಬಡಿತದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿದ್ದರಿಂದ ಶಾಶ್ವತವಾದ ಪೇಸ್‌ಮೇಕರ್ ಅಳವಡಿಕೆ ಮಾಡಲಾಯಿತು. ಈಗ ರೋಗಿಯು ಸಂಪೂರ್ಣ ಚೇತರಿಸಿಕೊಂಡು ತೆರಳಿದ್ದಾರೆ’ ಎಂದು ಮಾಹಿತಿ ನೀಡಿದರು.

‘ರೋಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರಿಗೆ ಅರೇಬಿಕ್ ಭಾಷೆ ಹೊರತಾಗಿ, ಬೇರೆ ಭಾಷೆ ಬರುತ್ತಿರಲಿಲ್ಲ. ಆದ್ದರಿಂದ ವೈದ್ಯರು ‘ಗೂಗಲ್ ಟ್ರಾನ್ಸ್‌ಲೇಟರ್’ ಬಳಸಿ ರೋಗಿಯೊಂದಿಗೆ ಸಂವಹನ ನಡೆಸಿದರು. ರೋಗಿಯು ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ, ಶಸ್ತ್ರಚಿಕಿತ್ಸೆ ವೆಚ್ಚವನ್ನು ಸರ್ಕಾರೇತರ ಸಂಸ್ಥೆ, ದಾನಿಗಳ ನೆರವು ಹಾಗೂ ಸಂಸ್ಥೆಯಿಂದ ಭರಿಸಲಾಗಿದೆ. ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.