ಬೆಂಗಳೂರು: ‘ಜೆ.ಪಿ ಉದ್ಯಾನದಲ್ಲಿ ಜಯಪ್ರಕಾಶ್ ನಾರಾಯಣ ಅವರ ಪುತ್ಥಳಿ ಮರು ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಪ್ರಯುಕ್ತ ನಗರದ ಜೆ.ಪಿ ಉದ್ಯಾನದಲ್ಲಿ ಸಾರ್ವಜನಿಕರ ಜೊತೆ ಭಾನುವಾರ ಹೆಜ್ಜೆ ಹಾಕಿ, ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.
‘ಉದ್ಯಾನದ ಸೌಂದರ್ಯೀಕರಣ, ಈಜುಕೊಳ, ಯೋಗಶಾಲೆ, ಜಿಮ್ ಹಾಗೂ ಮಕ್ಕಳ ಆಟದ ಮೈದಾನ, ಮಕ್ಕಳ ರೈಲುಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಪಾಲಿಕೆ ಆಯುಕ್ತರು ಹಾಗೂ ಜೆ.ಪಿ.ಪಾರ್ಕ್ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಿಂದ ಉದ್ಯಾನದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಪ್ರತಿದಿನ ಎಲ್ಲ ಶೌಚಾಲಯಗಳಿಗೆ ಬೀಗ ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದರು. ಪ್ರತ್ಯೇಕ ವಿಶ್ರಾಂತಿ ಕುಟೀರ ಬೇಕು ಎಂದು ಮಹಿಳಾ ನಡಿಗೆದಾರರು ಬೇಡಿಕೆ ಇಟ್ಟರು.
ಸಹಾಯವಾಣಿಗೆ ಕರೆ ಮಾಡಿ: ‘ಉದ್ಯಾನದ ಅಧ್ವಾನಗಳನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಅದರ ವಿಡಿಯೊ ಚಿತ್ರೀಕರಣ ಕೂಡ ಮಾಡಿಸಿದ್ದೇನೆ. ಜಿಬಿಎ ವ್ಯಾಪ್ತಿಯಲ್ಲಿ ಯಾವುದೇ ಕುಂದುಕೊರತೆಗಳು, ಸಮಸ್ಯೆಗಳು ಕಂಡುಬಂದರೆ 1533 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಅಹವಾಲನ್ನು ಸಲ್ಲಿಸಬಹುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
‘ರಾಜಕುಮಾರ್ ರಸ್ತೆಯಲ್ಲಿನ ಕಸದ ಸಮಸ್ಯೆ, ಮಂಗನಪಾಳ್ಯದ ಬಳಿ ಕೆಳ ಸೇತುವೆ ನಿರ್ಮಾಣ, ಗಂಗಮ್ಮ ಸರ್ಕಲ್ ಬಳಿಯ ಸಮಸ್ಯೆಗಳು ಸೇರಿದಂತೆ ಎಲ್ಲರ ಅಹವಾಲುಗಳಿಗೆ ನಮ್ಮ ಅಧಿಕಾರಿಗಳು ನಿಮ್ಮ ಬಳಿ ಬಂದು ಪರಿಹಾರ ಒದಗಿಸುತ್ತಾರೆ’ ಎಂದರು.
ಜೆ.ಪಿ.ಪಾರ್ಕ್ ವ್ಯಾಪ್ತಿಯಲ್ಲಿ ಸುಮಾರು 44 ಕಾಮಗಾರಿಗಳು ಮಂಜೂರಾಗಿ ಶೇ 80 ರಷ್ಟು ಹಣ ಬಿಡುಗಡೆಯಾಗಿದ್ದರೂ ಯಾವುದೇ ಕಾಮಗಾರಿಗಳು ನಡೆದಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ವಿನ್ಸೆಂಟ್ ಬರ್ನಾಡ್ ದೂರಿದಾಗ ‘ಈ ಬಗ್ಗೆ ತನಿಖೆ ಮಾಡುವಂತೆ ಸೂಚಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ರಾಕ್‌ಲೈನ್ ಮಾಲ್ ಬಳಿ ರಸ್ತೆಗುಂಡಿ ಹಾಗೂ ದಾಸರಹಳ್ಳಿ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಬಗ್ಗೆ ದಾಸರಹಳ್ಳಿ ನಗರಸಭೆ ಮಾಜಿ ಅಧ್ಯಕ್ಷ ಕೆ.ಸಿ ಅಶೋಕ್ ಗಮನ ಸೆಳೆದರು.
ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.