ADVERTISEMENT

ಕೆಲಸ ಇಲ್ಲದವರಷ್ಟೇ ಜೆಡಿಎಸ್‌ಗೆ: ಅಸಹಾಯಕತೆ ವ್ಯಕ್ತಪಡಿಸಿದ ದೇವೇಗೌಡ

ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 17:25 IST
Last Updated 11 ಫೆಬ್ರುವರಿ 2020, 17:25 IST
ಕಾರ್ಯಕಾರಿಣಿಯಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್‌.ಪ್ರಸಾದ್‌ ಚರ್ಚೆಯಲ್ಲಿ ತೊಡಗಿದ್ದರು. ಪಕ್ಷದ ಮುಖಂಡರಾದ ಶ್ರೀಪತಿರಾವ್ ಶಿಂಧೆ, ಬಿ.ಎಂ. ಫಾರೂಕ್‌, ಕೆ.ಎಂ.ನಾಣು, ಕೇರಳ ಸರ್ಕಾರದ ಸಚಿವ ಕೃಷ್ಣನ್ ಕುಟ್ಟಿ ಇದ್ದರು – ಪ್ರಜಾವಾಣಿ ಚಿತ್ರ
ಕಾರ್ಯಕಾರಿಣಿಯಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್‌.ಪ್ರಸಾದ್‌ ಚರ್ಚೆಯಲ್ಲಿ ತೊಡಗಿದ್ದರು. ಪಕ್ಷದ ಮುಖಂಡರಾದ ಶ್ರೀಪತಿರಾವ್ ಶಿಂಧೆ, ಬಿ.ಎಂ. ಫಾರೂಕ್‌, ಕೆ.ಎಂ.ನಾಣು, ಕೇರಳ ಸರ್ಕಾರದ ಸಚಿವ ಕೃಷ್ಣನ್ ಕುಟ್ಟಿ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನತಾ ಪರಿವಾರದಿಂದ ಹೊರಗೆ ಹೋಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಇರುವವರಿಗೆ ಆ ಪಕ್ಷದಲ್ಲಿ ಅನಾದರ ಉಂಟಾಗದ ಹೊರತು ಅವರನ್ನು ಮತ್ತೆ ಕರೆತರುವುದು ಸಾಧ್ಯವಿಲ್ಲ. ಇತರೆಡೆ ಕೆಲಸ ಇಲ್ಲದೆ ಕುಳಿತವರನ್ನಷ್ಟೇ ಪಕ್ಷಕ್ಕೆ ಕರೆಸಿಕೊಳ್ಳಬಹುದು’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಮಂಗಳವಾರ ಇಲ್ಲಿ ಕೊನೆಗೊಂಡ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯ ಬಳಿಕ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ‘ನೀವು ದೆಹಲಿಗೆ ಬಂದು ಕುಳಿತುಕೊಳ್ಳಿ, ಜನತಾ ಪರಿವಾರದಿಂದ ಹೊರಗೆ ಹೋದವರನ್ನು ಕರೆತರಬಹುದು ಎಂದು ಹಲವರು ಹೇಳುತ್ತಿದ್ದಾರೆ, ಆದರೆ ಅದು ಅಷ್ಟು ಸುಲಭದ ಮಾತಲ್ಲ, ಅವರಿಗಾಗಿ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ’ ಎಂದರು.

‘ಕೇರಳ ಸಹಿತ ಹಲವು ರಾಜ್ಯಗಳಲ್ಲಿ ಪಕ್ಷವನ್ನು ಮತ್ತೆ ಒಗ್ಗೂಡಿಸುವ ಹೊಣೆಯನ್ನು ಆಯಾ ರಾಜ್ಯದವರಿಗೇ ನೀಡಿದ್ದೇನೆ.ನಾನು ಹಿಂದಿ ಭಾಷೆಯಲ್ಲಿ ಮಾತನಾಡುವುದಿಲ್ಲ ಎಂಬ ಕಾರಣಕ್ಕೆನಮ್ಮ ಪಕ್ಷವನ್ನುಬೇರೆ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಸುವುದಕ್ಕೆ ಸಾಧ್ಯ ಆಗುತ್ತಿಲ್ಲ ಅಷ್ಟೇ’ ಎಂದರು.

ADVERTISEMENT

‘1989ರಲ್ಲಿ ನನ್ನನ್ನು ಪಕ್ಷದಿಂದಲೇ ಹೊರ ಹಾಕಿದರು. ನನ್ನ ನಾದಿನಿ ಮನೆ ಮಾರಿ ಪಕ್ಷ ಉಳಿಸಿದ್ದೆ. 1994ರಲ್ಲಿ ಪಕ್ಷದ ಅಧ್ಯಕ್ಷ ನಾನೇ ಆದೆ, 115 ಸೀಟುಗಳೂ ದೊರೆತವು. ದೆಹಲಿಯಲ್ಲಿ ಎಎಪಿ ಸಾಧಿಸಿದ ಯಶಸ್ಸನ್ನು ನಾವು ಸಹ ಸಾಧಿಸುವುದು ಸಾಧ್ಯವಿದೆ’ ಎಂದು ಹೇಳಿದರು.

ದೇಶದ ನಾನಾ ಭಾಗಗಳಿಂದ ಬಂದ ಪಕ್ಷದ ಕಾರ್ಯಕರ್ತರನ್ನು ಉಲ್ಲೇಖಿಸಿದ ಅವರು, ಜೆಡಿಎಸ್‌ ಒಂದು ರಾಷ್ಟ್ರೀಯ ಪಕ್ಷ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ನಾಲ್ಕು ನಿರ್ಣಯ ಅಂಗೀಕಾರ

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಯನ್ನು ಅಂಗೀಕರಿಸಬೇಕು. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಕೇಂದ್ರ ತಕ್ಷಣ ಕ್ರಮ ಕೈಗೊಳ್ಳಬೇಕು. ಸಿಎಎ ವಿರುದ್ಧ ಪಕ್ಷದ ವತಿಯಿಂದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುತ್ತದೆ. ಜತೆಗೆ ಪಕ್ಷವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಪಕ್ಷಕ್ಕೆ ಆಂತರಿಕ ಚುನಾವಣೆ ನಡೆಸುವುದಕ್ಕೆ ಹೊಣೆಗಾರರೊಬ್ಬರನ್ನು ನೇಮಿಸುವ ಅಧಿಕಾರವನ್ನು ದೇವೇಗೌಡರಿಗೆ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ಎಎಪಿಗೆ ಜಯ; ಜೆಡಿಎಸ್‌ ವಿಜಯೋತ್ಸವ

ದೆಹಲಿಯಲ್ಲಿ ಎಎಪಿ ಜಯ ಸಾಧಿಸುತ್ತಿದ್ದಂತೆಯೇ, ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ‘ಎಎಪಿ ಪ್ರಾದೇಶಿಕ ಪಕ್ಷ, ಅದಕ್ಕೆ ದೊರೆತ ಜಯ ಎಂದರೆ ಪ್ರಾದೇಶಿಕ ಪಕ್ಷದ ಬಲವರ್ಧನೆಯ ಸಂಕೇತ’ ಎಂದು ಘೋಷಿಸಿದ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ, ವೇದಿಕೆಗೆ ಸಿಹಿ ತರಿಸಿ ಗಣ್ಯರಿಗೆ ಹಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.