ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಆವರಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ಪ್ಲಾಸ್ಟಿಕ್ ಮರುಬಳಕೆಗೆ ಕಾಳಜಿವಹಿಸಬೇಕು’ ಎಂದು ಬಿಸ್ಲೆರಿ ಇಂಟರ್‌ನ್ಯಾಷನಲ್ ಸಂಸ್ಥೆಯ ಕರ್ನಾಟಕ ವಿಭಾಗದ ಸಿಎಸ್‌ಆರ್ ಎಕ್ಸಿಕ್ಯೂಟಿವ್ ಸೂರಜ್‌ಕುಮಾರ್ ಮನವಿ ಮಾಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ 'ಪ್ಲಾಸ್ಟಿಕ್ ಮರುಬಳಕೆ ತರಬೇತಿ ಅಭಿಯಾನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜ್ಞಾನಭಾರತಿ ಆವರಣವನ್ನು ಪ್ಲಾಸ್ಟಿಕ್ ಹಾಗೂ ಕಸ ಮುಕ್ತವಾಗಿಸಲು ಬೆಂಗಳೂರು ವಿಶ್ವವಿದ್ಯಾಲಯ, ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಭಾಗವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
‘ಪ್ಲಾಸ್ಟಿಕ್ ಮರುಬಳಕೆಗೆ ಪ್ರಯತ್ನಿಸಬೇಕು. ಮನೆಯಲ್ಲಿಯೂ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು. ಬಾಟಲ್ ಫಾರ್ ಚೇಂಜ್ ಎಂಬ ಆ್ಯಪ್ ಮೂಲಕ ನೀರಿನ ಬಾಟಲ್‌ಗಳನ್ನು ಮರುಬಳಕೆಗೆ ನೀಡಬಹುದು’ ಎಂದು ಸಲಹೆ ನೀಡಿದರು.
‘ವಿಶ್ವವಿದ್ಯಾಲಯದ ಪ್ರಮುಖ ಸ್ಥಳಗಳು, ಶೈಕ್ಷಣಿಕ ವಿಭಾಗ, ಆಡಳಿತ ಕಟ್ಟಡ, ವಿದ್ಯಾರ್ಥಿ ನಿಲಯಗಳ ಹೊರಗೆ ಕಸದ ಬುಟ್ಟಿ ಅಳವಡಿಸಲಾಗುತ್ತದೆ. ಜ್ಞಾನಭಾರತಿ ಆವರಣದಲ್ಲಿ ಏಳು ವಿಧದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸ್ಲೆರಿ ಸಂಸ್ಥೆಯ ವತಿಯಿಂದ ನಿರಂತರವಾಗಿ ಸಂಗ್ರಹಿಸಿ ಮರುಬಳಕೆ ಮಾಡಲಾಗುವುದು’ ಎಂದು ಭವಿಷ್ಯದ ಯೋಜನೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಬಿ.ಸಿ.ನಾಗರಾಜ, ಡೀನ್ ಪ್ರೊ.ಅಶೋಕ್ ಡಿ. ಹಂಜಗಿ, ಪ್ರಾಧ್ಯಾಪಕರಾದ ಪಿ.ಸಿ.ಕೃಷ್ಣಸ್ವಾಮಿ, ನಿರ್ಮಲ, ವಾಹಿನಿ, ಪುಟ್ಟಸ್ವಾಮಯ್ಯ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.