ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿರುವ ಜೀವವೈವಿಧ್ಯ ಕಾಡಿನಲ್ಲಿ ಸಾವಿರಾರು ಮರಗಳನ್ನು ಕಡಿಯುವ ಯಾವುದೇ ರೀತಿಯ ಅಭಿವೃದ್ಧಿಗೆ ಅನುವು ಮಾಡಿಕೊಡದೆ, ‘ಜೈವಿಕ ವೈವಿಧ್ಯ ವನ’ ಅಥವಾ ‘ಪಾರಂಪರಿಕ ತಾಣ’ ಎಂದು ಘೋಷಿಸಲು ರಾಜ್ಯಪಾಲರಿಗೆ ಪರಿಸರ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಯುವಿಸಿಇ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಹಾಗೂ ಬಿಬಿಎಂಪಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈಡೆಕ್ ಸೇರಿದಂತೆ ಯಾವುದೇ ಸಂಸ್ಥೆಗಳಿಗೆ ಯಾವುದೇ ರೀತಿಯ ನಿರ್ಮಾಣಕ್ಕೆ ಜಮೀನು ನೀಡಬಾರದು ಎಂದು ಪರಿಸರ ಕಾರ್ಯಕರ್ತ ಎ.ಎನ್. ಯಲ್ಲಪ್ಪರೆಡ್ಡಿ ನೇತೃತ್ವದ ಪರಿಸರ ಕಾರ್ಯಕರ್ತರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಪತ್ರ ಬರೆದಿದ್ದಾರೆ.
ಯಲ್ಲಪ್ಪ ರೆಡ್ಡಿ ಅವರು ಜ್ಞಾನಭಾರತಿ ಆವರಣವನ್ನು ಜೀವವೈವಿಧ್ಯ ತಾಣವನ್ನಾಗಿಸುವ ಕಾರ್ಯ ಆರಂಭಿಸಿದ್ದರು. ಆ ಕಾರ್ಯವನ್ನು ಪ್ರಾಧ್ಯಾಪಕ ಟಿ.ಜೆ.ರೇಣುಕಾ ಪ್ರಸಾದ್ ಮುಂದುವರಿಸಿಕೊಂಡು ಬಂದಿದ್ದು, 660 ಎಕರೆಯಲ್ಲಿ ನಗರದ ಅತಿದೊಡ್ಡ ‘ಜೀವ ವೈವಿಧ್ಯ ವನ’ ಸೃಷ್ಟಿ ಆಗಿದೆ. ನೂರಾರು ಜಾತಿಯ ಪಕ್ಷಿಗಳು ಹಾಗೂ ದುಂಬಿಗಳು ಆಶ್ರಯ ಪಡೆದಿವೆ. ಪಂಚವಟಿ ಹಾಗೂ ಪಂಚವಲ್ಕಲ, ಹಣ್ಣಿನ ತೋಟ, ಮಿಯಾವಾಕಿ, ಒತ್ತು ಅರಣ್ಯ, ಸಹಸ್ರಾರು ಶ್ರೀಗಂಧದ ಮರಗಳಿಂದ ಹಸಿರು ತುಂಬಿದೆ. ಭಾರತದ ವಿಶ್ವವಿದ್ಯಾಲಯಗಳಲ್ಲಿಯೇ ಅತಿದೊಡ್ಡ ಜೀವವೈವಿಧ್ಯ ವನ ಇದಾಗಿದ್ದು, ಕಟ್ಟೆ, ಕಲ್ಯಾಣಿಗಳಿಂದ ತುಂಬಿ ‘ಬಯೊ-ಜಿಯೊ-ಹೈಡ್ರೊ ಪಾರ್ಕ್’ ಆಗಿದೆ. ಇಂತಹ ವನವನ್ನು ನಾಶಮಾಡಿ ಹಲವು ಸಂಸ್ಥೆಗಳಿಗೆ ಜಮೀನು ನೀಡಿ, ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೋರಲಾಗಿದೆ.
‘ಜ್ಞಾನಭಾರತಿ ಹಸಿರುಧಾಮ, ಆಮ್ಲಜನಕದ ಕಣಜವಾಗಿ, ಇಂಗಾಲ ಹೀರಿಕೊಳ್ಳುವ ಕೆಲಸ ಮಾಡುತ್ತಿದೆ. ಜ್ಞಾನಭಾರತಿಯಲ್ಲಿ ರೋಟರಿ, ಲಯನ್ಸ್, ಸ್ವಾಟ್, ಗ್ರೀನ್ಸ್ ಆರ್ಮಿ ಫೋರ್ಸ್, ಮಿಡಿತ ಫೌಂಡೇಷನ್, ಜೀವನ್ಮುಕ್ತಿ, ಅದಮ್ಯ ಚೇತನ, ನೆರವು, ಯೂತ್ ಫಾರ್ ಸೇವಾ ಸೇರಿದಂತೆ ಹತ್ತು ಹಲವಾರು ಸಂಘ ಸಂಸ್ಥೆಗಳು ಜತೆಗೂಡಿ ಎರಡು ದಶಕಗಳಲ್ಲಿ ಲಕ್ಷಾಂತರ ಮರಗಳ ಜೈವಿಕ ವನ ನಿರ್ಮಾಣವಾಗಿದೆ. ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿದೆ. ಅಪರೂಪದ ಮರಗಳನ್ನೂ ಹೊಂದಿರುವ ಈ ವನವನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶಪಡಿಸಲು ಯೋಜಿಸಲಾಗಿದೆ’ ಎಂದು ಜ್ಞಾನಭಾರತಿ ವಾಯುವಿಹಾರಿಗಳ ಸಂಘದ ಕಾರ್ಯದರ್ಶಿ ಎಚ್.ಕೆ. ಗೌಡಯ್ಯ ದೂರಿದರು.
‘ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರ ನೇತೃತ್ವದಲ್ಲಿ ಜ್ಞಾನಭಾರತಿಯಲ್ಲಿರುವ ವನ ಉಳಿಸಲು, ಯಾರಿಗೂ ಇಲ್ಲಿ ಜಾಗ ನೀಡದಂತೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತದೆ’ ಎಂದು ಸಂಘಟನೆಯ ಪರಶುರಾಮಗೌಡ ತಿಳಿಸಿದರು.
ವರದಿ ಪರಿಶೀಲಿಸಲು ಒತ್ತಾಯ
‘ವಿಶ್ವವಿದ್ಯಾಲಯದ ಸಿಂಡಿಕೇಟ್‌ನಲ್ಲಿ 2017 ಮತ್ತು 2022ರಲ್ಲಿ ಜ್ಞಾನಭಾರತಿ ಆವರಣದಲ್ಲಿರುವ ಬಯೊಪಾರ್ಕ್ ಅನ್ನು ಸಂರಕ್ಷಿಸಲು ನಿರ್ಣಯ ಕೈಗೊಳ್ಳಲಾಗಿದೆ. ಜ್ಞಾನಭಾರತಿ ಆವರಣದಲ್ಲಿ ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ನ್ಯಾಕ್ ಕೂಡ ಹೇಳಿದೆ. ಹೀಗಾಗಿ ಜ್ಞಾನಭಾರತಿ ಆವರಣವನ್ನು ಜೀವವೈವಿಧ್ಯ ಕಾಯ್ದೆ– 2002ರಂತೆ ‘ಪಾರಂಪರಿಕ ತಾಣ’ ಎಂದು ಘೋಷಿಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯ ರಚಿಸಿದ್ದ ಸಮಿತಿ ವರದಿ ನೀಡಿದೆ. ‘ಜ್ಞಾನಭಾರತಿ ವಾಯುವಿಹಾರಿಗಳ ಸಂಘ ಸಲ್ಲಿಸಿದ್ದ ದೂರಿನ ಮೇರೆಗೆ ರಾಜ್ಯಪಾಲರಿಗೆ ವೈಜ್ಞಾನಿಕ ವರದಿ ಸಲ್ಲಿಸಲು ಮೌಲ್ಯಮಾಪನ ಕುಲಸಚಿವರ ಅಧ್ಯಕ್ಷತೆಯಲ್ಲಿ 2024ರ ಸೆಪ್ಟೆಂಬರ್ 26ರಂದು ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ನೀಡಿದ್ದರೂ ಅದನ್ನು ರಾಜ್ಯಪಾಲರಿಗೆ ತಲುಪಿಸಿಲ್ಲ. ರಾಜ್ಯಪಾಲರು ಈ ವರದಿಯನ್ನು ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪ್ರಾಧ್ಯಾಪಕ ಡಿ.ಜೆ. ರೇಣುಕಾಪ್ರಸಾದ್ ಒತ್ತಾಯಿಸಿದರು.
ಸಿಂಡಿಕೇಟ್ ನಿರ್ಣಯ ಉಲ್ಲಂಘನೆ
‘2017ರಲ್ಲಿ ಸಿಂಡಿಕೇಟ್ ಸಭೆಯಲ್ಲಿ ಜ್ಞಾನಭಾರತಿಯ ಜಮೀನನ್ನು ಯಾರಿಗೂ ನೀಡದಂತೆ ನಿರ್ಣಯ ಕೈಗೊಳ್ಳಲಾಗಿದೆ. ‘ಜೀವ ವೈವಿಧ್ಯ ವನ’ವನ್ನಾಗಿ ಉಳಿಸಿಕೊಳ್ಳುವಂತೆ ಸರ್ಕಾರವೂ ಆದೇಶಿಸಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೂಡ ‘ನಗರವನ ಬೆಳೆಸಿ ‘ಜೀವವೈವಿಧ್ಯ ಅರಣ್ಯ’ ಮಾಡಲು ಆದೇಶಿಸಿದೆ. ಬಿಬಿಎಂಪಿಯ ಜೀವವೈವಿಧ್ಯ ನಿರ್ವಹಣಾ ಸಮಿತಿ ತನ್ನ ಅಧ್ಯಯನ ವರದಿಯಲ್ಲಿ ‘ವರ್ಷದಲ್ಲಿ ಸುಮಾರು ₹16500 ಕೋಟಿ ಮೌಲ್ಯದ ಆಮ್ಲಜನಕ ಉತ್ಪಾದನಾ ಕೇಂದ್ರ’ ಎಂದು ಹೇಳಿದೆ. ಇಂತಹ ವನದಲ್ಲಿ ಸುಮಾರು 300 ಎಕರೆಯನ್ನು ಇತರೆ ಸಂಸ್ಥೆಗಳಿಗೆ ನೀಡಲು ಸಚಿವರೊಬ್ಬರು ಸೂಚನೆ ನೀಡಿದ್ದಾರೆ. ಅದರಂತೆ ವಿಶ್ವವಿದ್ಯಾಲಯದ ಕುಲಪತಿಯವರು ‘ಒತ್ತಡಕ್ಕೆ ಒಳಗಾಗಿ ಜಮೀನು ನೀಡಲಾಗಿದೆ’ ಎಂದೂ ಹೇಳಿದ್ದಾರೆ. ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಜ್ಞಾನಭಾರತಿಯ ಆವರಣದಲ್ಲಿರುವ ವನವನ್ನು ಉಳಿಸಿಕೊಡಬೇಕು’ ಎಂದು ಪರಿಸರ ಕಾರ್ಯಕರ್ತರು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.