ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ: ಆಸ್ಪತ್ರೆಗೆ ಸೇರಿಸಿದ ಹೊಯ್ಸಳ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 21:50 IST
Last Updated 28 ಜೂನ್ 2022, 21:50 IST
   

ಬೆಂಗಳೂರು: ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಯೊಬ್ಬರನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸರ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

‘ಮಹಾರಾಷ್ಟ್ರ ಪುಣೆಯ ಅನಿಲ್ ದಾಬಾದ್ (24) ನಗರದ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ನೆಲೆಸಿದ್ದಾರೆ.’

‘ಮಾನಸಿಕವಾಗಿ ನೊಂದಿದ್ದರು ಎನ್ನಲಾದ ಅನಿಲ್, ಆತ್ಮಹತ್ಯೆಗೆ ತೀರ್ಮಾನಿಸಿದ್ದರು. ಬೆಂಗಳೂರಿನ ಬೇರೊಂದು ಪ್ರದೇಶದಲ್ಲಿ ವಾಸವಿರುವ ತಮ್ಮ ಸ್ನೇಹಿತನಿಗೆ ವಾಟ್ಸ್‌ಆ್ಯಪ್‌ನಲ್ಲಿ ಮರಣಪತ್ರ ಕಳುಹಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಮರಣಪತ್ರ ನೋಡಿ ಗಾಬರಿಗೊಂಡಿದ್ದ ಸ್ನೇಹಿತ, ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 112ಕ್ಕೆ ಕರೆ ಮಾಡಿದ್ದರು. ಪೇಯಿಂಗ್ ಗೆಸ್ಟ್ ವಿಳಾಸ ನೀಡಿ, ಸ್ನೇಹಿತನನ್ನು ರಕ್ಷಿಸುವಂತೆ ಕೋರಿದ್ದರು.’

‘ನಿಯಂತ್ರಣ ಕೊಠಡಿ ಸಿಬ್ಬಂದಿ ಜೆ.ಪಿ. ನಗರ ಠಾಣೆಯ ಹೊಯ್ಸಳ ಗಸ್ತು ವಾಹನಕ್ಕೆ ಮಾಹಿತಿ ರವಾನಿಸಿದ್ದರು. ಕರ್ತವ್ಯದಲ್ಲಿದ್ದ ಎಎಸ್‌ಐ ರಮೇಶ್ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಚಂದ್ರಶೇಖರ್, ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಹೋಗಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಗಡಿ ಲೆಕ್ಕಿಸದೇ ಕರ್ತವ್ಯ ನಿರ್ವಹಣೆ’

‘ವಿದ್ಯಾರ್ಥಿ ಅನಿಲ್ ವಾಸವಿದ್ದ ಪೇಯಿಂಗ್ ಗೆಸ್ಟ್ ಕಟ್ಟಡ, ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿದೆ. ಜೆ.ಪಿ.ನಗರ ಠಾಣೆಯ ಎಎಸ್‌ಐ ರಮೇಶ್ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಚಂದ್ರಶೇಖರ್, ನಿಯಂತ್ರಣ ಕೊಠಡಿಯಿಂದ ಮಾಹಿತಿ ಬರುತ್ತಿದ್ದಂತೆ ಠಾಣೆ ಗಡಿ ಲೆಕ್ಕಿಸದೇ ಸ್ಥಳಕ್ಕೆ ಹೋಗಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. ಇವರಿಬ್ಬರ ಕೆಲಸ ಮೆಚ್ಚುವಂಥದ್ದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.