ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘದ ಸುವರ್ಣ ಮಹೋತ್ಸವದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ದಂಡ, ನ್ಯಾಯಾಲಯ ಶುಲ್ಕ, ವಿವಿಧ ಹುದ್ದೆಗಳ ಪರೀಕ್ಷಾ ಶುಲ್ಕದ ರೂಪದಲ್ಲಿ ನ್ಯಾಯಾಂಗ ಇಲಾಖೆಯಿಂದ ₹1,044 ಕೋಟಿ ಸಂಗ್ರಹಿಸಿದೆ. ಆದರೆ ನ್ಯಾಯಾಂಗ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗೆ ಎಷ್ಟು ಅನುದಾನ ಒದಗಿಸಿದೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘ ಭಾನುವಾರ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವ, ಎಂಟನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ನ್ಯಾಯಾಂಗ ಇಲಾಖೆಗೆ ಹೆಚ್ಚು ಅನುದಾನ ನೀಡಲಾಗುತ್ತದೆ ಎಂಬುದು ಸುಳ್ಳು. ಸರ್ಕಾರ ನ್ಯಾಯಾಂಗ ಇಲಾಖೆಯಿಂದ 2022–23ನೇ ಸಾಲಿನಲ್ಲಿ ₹ 364.40 ಕೋಟಿ, 2023–24ನೇ ಸಾಲಿನಲ್ಲಿ ₹ 376.80 ಕೋಟಿ ಹಾಗೂ 2024–25ನೇ ಸಾಲಿನಲ್ಲಿ ₹ 302.80 ಕೋಟಿ ಸಂಗ್ರಹಿಸಿದೆ. ಈ ಬಗ್ಗೆ ಜಿಲ್ಲಾವಾರು ಅಂಕಿ–ಅಂಶಗಳಿವೆ. ನ್ಯಾಯಾಂಗ ಇಲಾಖೆಯ ಕಟ್ಟಡ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಇದರ ಅರ್ಧದಷ್ಟು ಅನುದಾನವನ್ನೂ ಒದಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಜಿಲ್ಲಾ ಮಟ್ಟದ ನ್ಯಾಯಾಧೀಶರು ಮತ್ತು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ನೌಕರರ ಮೇಲೆ ಯಜಮಾನಿಕೆಯ ಪ್ರವೃತ್ತಿ ತೋರಿಸದೆ ಅವರೊಂದಿಗೆ ಸೌಹಾರ್ದವಾಗಿ ನಡೆದುಕೊಳ್ಳಬೇಕು. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ವರ್ಷಕ್ಕೆ ಎರಡು ಬಾರಿ ಪದೋನ್ನತಿಗೆ ಸಂಬಂಧಿಸಿದ ಸಭೆ ನಡೆಸಬೇಕು. ಅರ್ಹತೆ ಆಧಾರದಲ್ಲಿ ನೌಕರರಿಗೆ ಬಡ್ತಿ ನೀಡಬೇಕು. ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೂಚನೆ ನೀಡಬೇಕು’ ಎಂದರು.
ಇದೇ ಸಂದರ್ಭ, ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿ 21 ಬೇಡಿಕೆಗಳನ್ನು ಈಡೇರಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯ ಅವರಿಗೆ ಮನವಿ ಸಲ್ಲಿಸಲಾಯಿತು.
ಎ.ಎಸ್. ಮಕಾನದಾರ್ ಅವರು ಸಂಪಾದಿಸಿದ ‘ಉಸಿರು ಗಂಧ ಸೋಕಿ’, ‘ಬಂಧನದಿಂದ ಬಯಲಿಗೆ’ ಎ.ಎಸ್. ಮಕಾನದಾರ್ ಮತ್ತು ಎಸ್.ಟಿ. ಸೋಮಶೇಖರ್ ಸಂಪಾದಿಸಿದ ‘ಕಣ್ಣ ಹಿಗ್ಗಿನ ತ್ವಾಟ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯ ಮಾತನಾಡಿದರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ್ ರಾವ್, ಕೆ.ಎಸ್. ಮುದಗಲ್, ಸಂಘದ ಅಧ್ಯಕ್ಷ ಎಚ್.ವಿ. ನಾಗೇಶ್, ಪ್ರಧಾನ ಕಾರ್ಯದರ್ಶಿ ಕೆ. ಪುರುಷೋತ್ತಮ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉಪಸ್ಥಿತರಿದ್ದರು.
‘ಶೇ 20 ಮನೆಗಳನ್ನು ಮೀಸಲಿಡಿ’
‘ಬಿಡಿಎ ಗೃಹಮಂಡಳಿ ನಿರ್ಮಿಸುವ ಮನೆಗಳಲ್ಲಿ ಶೇಕಡ 10 ರಿಂದ 20ರಷ್ಟು ಮನೆಗಳನ್ನು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಗೆ ಮೀಸಲಿಡಬೇಕು. ಬಡ್ತಿ ಪಡೆದ ನೌಕರರಿಗೆ ಕಾಲ–ಕಾಲಕ್ಕೆ ತರಬೇತಿ ನೀಡಬೇಕು. ನ್ಯಾಯದಾನ ನೀಡುವ ಪ್ರಕ್ರಿಯೆಯಲ್ಲಿ ಒಬ್ಬ ನ್ಯಾಯಮೂರ್ತಿಯ ಪಾತ್ರ ಎಷ್ಟು ಮುಖ್ಯವೋ ನ್ಯಾಯಾಂಗ ಇಲಾಖೆಯ ನೌಕರರ ಪಾತ್ರವೂ ಅಷ್ಟೇ ಮುಖ್ಯ’ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.