ನ್ಯಾ.ಬಿ.ಕೆ.ಸೋಮಶೇಖರ್
ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಗುರುವಾರ (ಜ.15) ಮಧ್ಯಾಹ್ನ 3 ಗಂಟೆಗೆ ನಿಧನರಾದರು. ಅವರಿಗೆ 90 ವರ್ಷವಾಗಿತ್ತು. ನ್ಯಾ.ಸೋಮಶೇಖರ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
ಬಾಣಾವರ ಕೃಷ್ಣಮೂರ್ತಿ ಸೋಮಶೇಖರ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದವರು. ಇವರ ತಂದೆ ಕೃಷ್ಣಮೂರ್ತಿ ದೊಡ್ಡಬಳ್ಳಾಪುರ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸರ್ಕಾರಿ ಪ್ಲೀಡರ್ ಆಗಿದ್ದರು.
ಬಿ.ಕೆ.ಸೋಮಶೇಖರ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಮತ್ತು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ (ಈಗ ವಿಶ್ವವಿದ್ಯಾಲಯ ಕಾನೂನು ಕಾಲೇಜು) ಕಾನೂನು ಪದವಿ ಪಡೆದು ಸನ್ನದು ನೋಂದಾಯಿಸಿ ವಕೀಲಿಕೆ ಆರಂಭಿಸಿದರು.
1965ರಲ್ಲಿ ಮುನ್ಸೀಫ್ ಆಗಿದ್ದರು. ದೇವದುರ್ಗದಲ್ಲಿ ಮೊದಲಿಗೆ ನ್ಯಾಯಾಧೀಶರಾಗಿ ಸೇವೆ ಆರಂಭಿಸಿ ನಂತರ ಬೆಳಗಾವಿ, ಚಿತ್ರದುರ್ಗ, ಕಾರವಾರ ಸೇರಿದಂತೆ ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸಿದರು. 1994ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು. ಕರ್ನಾಟಕ ಹೈಕೋರ್ಟ್‌ನಲ್ಲಿ ಆರು ತಿಂಗಳ ಸೇವೆ ಸಲ್ಲಿಸಿದ ನಂತರ ಅವಿಭಜಿತ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡಿದ್ದ ಅವರು 2003ರಲ್ಲಿ ಅಲ್ಲೇ ನಿವೃತ್ತಿ ಹೊಂದಿದ್ದರು.
ಕರ್ನಾಟಕದಲ್ಲಿ 2008ರ ಅವಧಿಯಲ್ಲಿ ನಡೆದಿದ್ದ ಚರ್ಚ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣಾ ಆಯೋಗದ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.
‘ಶನಿವಾರ (ಜ.17) ಸಂಜೆ 4 ಗಂಟೆಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹೆಚ್ಚಿನ ಸಂಪರ್ಕಕ್ಕಾಗಿ ಕುಟುಂಬದ ಸದಸ್ಯ ಕುಮಾರ್ ಅವರನ್ನು ಸಂಪರ್ಕಿಸಬಹುದು. ಸಂಖ್ಯೆ: 99860–24219
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.