ADVERTISEMENT

ಕೆರಿಬಿಯನ್‌ ದ್ವೀಪ ರಾಷ್ಟ್ರಗಳಿಗೆ ಶ್ರೀನಿವಾಸ ನೂತನ ಹೈಕಮಿಷನರ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:30 IST
Last Updated 4 ಆಗಸ್ಟ್ 2019, 19:30 IST
ಕೆರಿಬಿಯನ್‌ ದ್ವೀಪರಾಷ್ಟ್ರಗಳ ನೂತನ ಹೈಕಮಿಷನರ್‌ ಶ್ರೀನಿವಾಸ ಅವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿನಂದಿಸಿದರು.
ಕೆರಿಬಿಯನ್‌ ದ್ವೀಪರಾಷ್ಟ್ರಗಳ ನೂತನ ಹೈಕಮಿಷನರ್‌ ಶ್ರೀನಿವಾಸ ಅವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿನಂದಿಸಿದರು.   

ಬೆಂಗಳೂರು: ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಡಾ. ಕೆ.ಜೆ.ಶ್ರೀನಿವಾಸ ಅವರನ್ನು ಕೆರಿಬಿಯನ್‌ ದ್ವೀಪ ರಾಷ್ಟ್ರಗಳಾದ ಗಯಾನ, ಸೆಂಟ್‌ ಕಿಟ್ಸ್‌ ಮತ್ತು ನೆವೀಸ್‌, ಅಂಟಿಗುವಾದ ನೂತನ ಹೈಕಮಿಷನರ್‌ ಆಗಿ ನೇಮಕಗೊಂಡಿದ್ದಾರೆ.

ಶ್ರೀನಿವಾಸ (41) ಅವರಿಗೆ ಅತ್ಯಂತ ಕಿರಿಯ ವಯಸ್ಸಿಗೇ ಭಾರತ ಸರ್ಕಾರ ಈ ಜವಾಬ್ದಾರಿಯನ್ನು ವಹಿಸಿದೆ. ಇವರು ಕನ್ನಡಿಗರು. ಕೆರಿಬಿಯನ್‌ ಸಮುದಾಯದ (ಕಾರಿಕಾಂ) ಕಾಯಂ ಪ್ರತಿನಿಧಿಯನ್ನಾಗಿಯೂ ನೇಮಿಸಿದೆ. ಇದೇ 13 ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ತಮ್ಮ ನೇಮಕದ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳ ಜತೆ ವಾಣಿಜ್ಯ– ವ್ಯವಹಾರ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳಲ್ಲಿ ಪಾಲುದಾರಿಕೆ ವಹಿಸುತ್ತಿದೆ. ಗಯಾನದ ಜನಸಂಖ್ಯೆಯಲ್ಲಿ ಶೇ 40 ಭಾರತೀಯ ಮೂಲದವರೇ ಇದ್ದಾರೆ. ಇವರ ಜತೆ ಬಾಂಧವ್ಯ ವೃದ್ಧಿ ಮಾಡಿ, ಭಾರತದ ಜತೆ ಮತ್ತೆ ಬೆಸೆಯುವ ಕಾರ್ಯ ಮಾಡಲಾಗುವುದು’ ಎಂದರು.

ADVERTISEMENT

‘ಗಯಾನದಲ್ಲಿ ಹೊಸದಾಗಿ ತೈಲ ನಿಕ್ಷೇಪಗಳು ಪತ್ತೆ ಆಗಿವೆ. ಭಾರತದ ತೈಲ ಅಗತ್ಯತೆ ಪೂರೈಸುವ ಉದ್ದೇಶದಿಂದ ಉಭಯ ದೇಶಗಳ ಜತೆ ಬಾಂಧವ್ಯ ಇನ್ನಷ್ಟು ನಿಕಟವಾಗಿದೆ. ಸೌರ ವಿದ್ಯುತ್‌ ಸಹಭಾಗಿತ್ವವೂ ಇದೆ’ ಎಂದು ಅವರು ವಿವರಿಸಿದರು.

ಶ್ರೀನಿವಾಸ ಅವರು ಧಾರವಾಡ, ಚಿತ್ರದುರ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದರು. 2000 ದಲ್ಲಿ ಎಂಬಿಬಿಎಸ್‌ ಕೋರ್ಸ್‌ ಮುಗಿಸಿದರು. 2010 ರಿಂದ ಮೂರು ವರ್ಷ ಬೆಂಗಳೂರಿನ ಪ್ರಾದೇಶಿಕ ಪಾಸ್‌ ಪೋರ್ಟ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆಗ ಅವರು ‘ಪಾಸ್‌ಪೋರ್ಟ್‌ ಸೇವಾ ಯೋಜನೆ’ಯನ್ನು ಆರಂಭಿಸಿದ್ದರು. ಆ ಬಳಿಕ ಅವರು ಸ್ಯಾನ್‌ಫ್ರಾನ್ಸಿಸ್ಕೊ, ಲಿಮಾ ಮತ್ತು ಮಾಡ್ರಿಡ್‌ನಲ್ಲಿ ಭಾರತೀಯ ಧೂತಾವಾಸದಲ್ಲಿ ಕಾರ್ಯ ನಿರ್ವಹಿಸಿದ್ದರು. 2016 ರ ಅಕ್ಟೋಬರ್‌ನಿಂದ ಇದೇ ಜುಲೈ 12 ರವರೆಗೆ ಜೊಹಾನ್ಸ್‌ಬರ್ಗ್‌ನಲ್ಲಿ ಭಾರತೀಯ ಕಾನ್ಸೂಲ್‌ ಜನರಲ್‌ ಆಗಿಯೂ ಸೇವೆ ಸಲ್ಲಿಸಿದ್ದರು.

ಭಾನುವಾರ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.