
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ಗೆ ಪಿ.ಸಿ.ಆಂಥೋನಿ ಸ್ವಾಮಿ ಹಾಗೂ ಬಿ.ಎಸ್.ತಲ್ವಾಡಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ತಲಾ ₹10 ಸಾವಿರ ನಗದು ಒಳಗೊಂಡಿದೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಆಯ್ಕೆ ಮಾಡಿದೆ. ಪ್ರತಿ ವರ್ಷ ಕನ್ನಡ ಕ್ರೈಸ್ತ ಸಾಧಕರೊಬ್ಬರು ಹಾಗೂ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಕಮ್ಮನಹಳ್ಳಿಯ ಪಿ.ಸಿ.ಆಂಥೋನಿ ಸ್ವಾಮಿ ಅವರು, ನವದೆಹಲಿಯಲ್ಲೂ ಕನ್ನಡ ಪರ ಕಾರ್ಯಚಟುವಟಿಕೆ ಕೈಗೊಂಡಿದ್ದರು. ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿದ ಬಳಿಕ, ಕನ್ನಡ ಪರ ಹೋರಾಟಗಳಲ್ಲಿಯೂ ಸಕ್ರಿಯರಾದರು. ಚರ್ಚ್‌ಗಳಲ್ಲಿ ಕನ್ನಡ ಬಳಕೆ ಕುರಿತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಬಿ.ಎಸ್.ತಲ್ವಾಡಿ ಅವರು ಗಡಿನಾಡು ಪ್ರದೇಶ ತಾಳವಾಡಿಯವರು. ಜನಪದ ವಿದ್ವಾಂಸರಾಗಿ, ವಿಮರ್ಶಕರಾಗಿ, ಬರಹಗಾರರಾಗಿ, ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯೇಸು ಕ್ರಿಸ್ತನ ಕುರಿತು ಮಹಾಕಾವ್ಯವನ್ನು ರಚಿಸಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.