ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ರಸ್ತೆಯಲ್ಲಿರುವ ಬಯಲು ಉದ್ಭವ ಗಣಪತಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಾಗಡಿ, ರಾಮನಗರ, ದೊಡ್ಡಬಳ್ಳಾಪುರ, ಬೆಂಗಳೂರಿನ ಭಕ್ತರು ಪರಿಷೆಯಲ್ಲಿ ಭಾಗವಹಿಸಿದ್ದರು. ಶನಿವಾರ ರಾತ್ರಿ ಕಲ್ಯಾಣೋತ್ಸವ ನಡೆಯಿತು.
ಭಾನುವಾರ ಮಧ್ಯಾಹ್ನ ತೇರು ಎಳೆಯುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಸೂರು ಬಾಳೆಹಣ್ಣು ಎಸೆದು ಭಕ್ತಿ ಮೆರೆದರು.
ಶುಕ್ರವಾರದಿಂದಲೇ ಸೊಂಡೆಕೊಪ್ಪ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳನ್ನು ತೆರೆಯಲಾಗಿತ್ತು. ಮಕ್ಕಳು ವಿವಿಧ ಮನರಂಜನಾತ್ಮಕ ಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು.
ಶನಿವಾರದಿಂದಲೇ ದೇವಸ್ಥಾನ ಟ್ರಸ್ಟ್ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದರು. 10 ಸಾವಿರಕ್ಕೂ ಹೆಚ್ಚು ಭಕ್ತರು ದಾಸೋಹ ಸ್ವೀಕರಿಸಿದರು. ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳು ಅಲ್ಲಲ್ಲಿ ಅರವಂಟಿಗೆಗಳನ್ನು ನಿರ್ಮಿಸಿಕೊಂಡು ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.