ADVERTISEMENT

ಕಲಾಗ್ರಾಮದಲ್ಲೇ ಭುವನೇಶ್ವರಿ ಮೂರ್ತಿ

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಸಂಸ್ಕೃತಿ ಇಲಾಖೆ * ಮಲ್ಲತ್ತಹಳ್ಳಿಯಲ್ಲಿ ಥೀಮ್‌ ಪಾರ್ಕ್‌ ಅಭಿವೃದ್ಧಿ

ವರುಣ ಹೆಗಡೆ
Published 8 ಮಾರ್ಚ್ 2023, 4:28 IST
Last Updated 8 ಮಾರ್ಚ್ 2023, 4:28 IST
ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ
ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ   

ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿಯೇ ಕನ್ನಡ ಮಾತೆ ‘ಭುವನೇಶ್ವರಿ’ಯ ಬೃಹತ್ ಮೂರ್ತಿಯನ್ನು ಸ್ಥಾಪಿಸಿ, ಅಲ್ಲಿಯೇ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೂರ್ತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನ್ನಡ ಮಾತೆಯ ಭಾವಚಿತ್ರವನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ. 25 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸುವುದು ಯೋಜನೆಯಲ್ಲಿದೆ. ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೆಸರುಘಟ್ಟದಲ್ಲಿ ಚಿತ್ರನಗರಿ ಸ್ಥಾಪನೆಗೆ ಗುರುತಿಸಲಾಗಿದ್ದ ಜಾಗ ಬಳಸಿಕೊಳ್ಳುವ ಪ್ರಸ್ತಾವನೆಯೂ ಇಲಾಖೆಯ ಮುಂದಿತ್ತು. ಕಲಾಗ್ರಾಮದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಪೂರಕ ವಾತಾವರಣ ಇರುವುದರಿಂದ ಈ ಸ್ಥಳವನ್ನೇ ಇಲಾಖೆ ಶಿಫಾರಸು ಮಾಡಿದೆ.

ಇತ್ತೀಚೆಗಷ್ಟೇ ಸರ್ಕಾರವು ಈ ಹಿಂದೆ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ್ದ ‘ನಾಡದೇವಿ’ಯ ಚಿತ್ರವನ್ನು ಅಧಿಕೃತವೆಂದು ಆದೇಶ ಹೊರಡಿಸಿತ್ತು. ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ ನಾಡದೇವಿಯ ಚಿತ್ರವನ್ನು ಕಲಾವಿದ ಸೋಮಶೇಖರ್‌ ಕೆ. ರಚಿಸಿದ್ದಾರೆ. ಈ ಚಿತ್ರದಲ್ಲಿ ‘ನಾಡದೇವಿ’ಯು ಕನ್ನಡ ಬಾವುಟವನ್ನು ಹಿಡಿದಿದೆ. ಅಧಿಕೃತಗೊಳಿಸಲಾದ ಇದೇ ಚಿತ್ರದ ಮೂರ್ತಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ADVERTISEMENT

ಇಲಾಖೆ ನಿರ್ವಹಣೆ: 30 ಎಕರೆಯಲ್ಲಿ ವ್ಯಾಪಿಸಿಕೊಂಡಿರುವ ಕಲಾಗ್ರಾಮದಲ್ಲಿ, ಸಂಸ್ಕೃತಿ ಇಲಾಖೆ 11 ಎಕರೆ ಪ್ರದೇಶವನ್ನು ನಿರ್ವಹಣೆ ಮಾಡುತ್ತಿದೆ. ಸೂಕ್ತ ಮೂಲಸೌಕರ್ಯ ಇಲ್ಲದ ಕಾರಣ ಕಲಾಗ್ರಾಮದಲ್ಲಿ ಪ್ರತಿವರ್ಷ ಬೆರಳಣಿಕೆಯಷ್ಟು ಕಾರ್ಯಕ್ರಮಗಳಷ್ಟೇ ನಡೆಯುತ್ತಿವೆ. ಅಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗ, ಶಿಲ್ಪಕಲಾ ಅಕಾಡೆಮಿಯ ಗ್ಯಾಲರಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ನಾಲ್ಕು ಬಯಲು ರಂಗಮಂದಿರಗಳು ಹಾಗೂ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಇವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಆಡಳಿತ ಕಚೇರಿ ತಲೆಯೆತ್ತುತ್ತಿದೆ. ಇಲ್ಲಿ ಖಾಲಿ ಸ್ಥಳಾವಕಾಶ ಇರುವುದರಿಂದ ಬೃಹದಾಕಾರದ ಮೂರ್ತಿ ನಿರ್ಮಾಣಕ್ಕೆ ಇಲಾಖೆ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.

‘ಕಲಾಗ್ರಾಮದಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನದ ಹಂಚಿಕೆಯ ಆಧಾರದ ಮೇಲೆ ಎಷ್ಟು ಅಡಿ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ವಿವಿಧ ಕಲಾ ಪ್ರಕರಗಳ ಬೆಳವಣಿಗೆಗೆ ಪೂರಕವಾಗುವಂತೆ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪ್ರತಿಮಾ ರೂಪಕ್ಕೆ ಶಿಫಾರಸು’
‘ಈ ಹಿಂದೆ ನಾಡದೇವಿಯ ಮೂರ್ತಿಯನ್ನು ಕನ್ನಡ ಭವನದಲ್ಲಿ ನಿರ್ಮಿಸುವ ಪ್ರಸ್ತಾಪವಿತ್ತು. ಆದರೆ, ಬೃಹತ್ ಮೂರ್ತಿ ನಿರ್ಮಾಣ ಅಲ್ಲಿ ಸಾಧ್ಯವಿಲ್ಲ. ಆದ್ದರಿಂದ ಕಲಾಗ್ರಾಮದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಭುವನೇಶ್ವರಿ ಚಿತ್ರವನ್ನು ಸರ್ಕಾರ ಅಧಿಕೃತಗೊಳಿಸಿದೆ. ಅದೇ ಚಿತ್ರವನ್ನು ಪ್ರತಿಮಾ ರೂಪದಲ್ಲಿ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕಲಾಗ್ರಾಮವನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಈ ಹಿಂದೆ ಸಮಿತಿ ರಚಿಸಿಲಾಗಿತ್ತು. ಆಗ ರೂಪುರೇಷೆ ಮಾಡಿ, ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇಡೀ ಕಲಾಗ್ರಾಮವನ್ನು ಥೀಮ್ ಪಾರ್ಕ್ ಆಗಿ ಅಭಿವೃದ್ಧಿಪಡಿಸಬಹುದು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಿ. ಮಹೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.