ADVERTISEMENT

ಕಳಸಾ–ಬಂಡೂರಿ ಯೋಜನೆ: ರೈತ ಹೋರಾಟಗಾರರಿಗೆ ನಿಲ್ದಾಣದಲ್ಲೇ ತಡೆ

ಯ ಅಧಿಸೂಚನೆ ಹೊರಡಿಸಲು ಆಗ್ರಹ * ರಾಜ್ಯಪಾಲರ ಭೇಟಿಗೆ ಸಿಗದ ಅವಕಾಶ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:59 IST
Last Updated 17 ಅಕ್ಟೋಬರ್ 2019, 19:59 IST
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿ ರೈತ ಹೋರಾಟಗಾರರು ಗುರುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿ ರೈತ ಹೋರಾಟಗಾರರು ಗುರುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಹದಾಯಿ, ಕಳಸಾ– ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿ ‘ಬೆಂಗಳೂರು ಚಲೊ’ ಮೂಲಕ ನಗರಕ್ಕೆ ಬಂದಿರುವ ರೈತ ಹೋರಾಟಗಾರರನ್ನು ಪೊಲೀಸರು ರೈಲು ನಿಲ್ದಾಣದಲ್ಲೇ ತಡೆದಿದ್ದಾರೆ.

ಹುಬ್ಬಳ್ಳಿಯಿಂದ ರೈಲಿನಲ್ಲಿ ಗುರುವಾರ ಬೆಳಿಗ್ಗೆ ನಗರಕ್ಕೆ ಬಂದ ರೈತರು, ಪಾದಯಾತ್ರೆ ಮೂಲಕರಾಜಭವನದತ್ತ ಹೊರಡಲು ಮುಂದಾಗಿದ್ದರು. ಪಾದಯಾತ್ರೆಗೆ ಅವಕಾಶ ನೀಡದ ಪೊಲೀಸರು, ‘ರಾಜಭವನಕ್ಕೆ ಹೋಗಲು ಬಿಡುವುದಿಲ್ಲ. ಸ್ವಾತಂತ್ರ್ಯ ಉದ್ಯಾನಕ್ಕೆ ಹೋಗಿ ಪ್ರತಿಭಟನೆ ಮಾಡಿ’ ಎಂದು ಹೇಳಿದರು.

ಅದಕ್ಕೆ ಒಪ್ಪದ ಹೋರಾಟಗಾರರು, ‘ಪ್ರತಿ ಬಾರಿಯೂ ಸ್ವಾತಂತ್ರ್ಯ ಉದ್ಯಾನದಲ್ಲೇ ಪ್ರತಿಭಟನೆ ಮಾಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ.

ADVERTISEMENT

ಈ ಬಾರಿ ರಾಜ್ಯಪಾಲರನ್ನು ಭೇಟಿಯಾಗಲೆಂದೇ ನಗರಕ್ಕೆ ಬಂದಿದ್ದೇವೆ. ಅವರನ್ನು ಭೇಟಿಯಾಗುವವರೆಗೂ ವಾಪಸ್‌ ಹೋಗುವುದಿಲ್ಲ’ ಎಂದು ಪಟ್ಟು ಹಿಡಿದರು. ರೈಲು ನಿಲ್ದಾಣದಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು. ಗುರುವಾರ ತಡರಾತ್ರಿಯೂ ಹೋರಾಟಗಾರರು ನಿಲ್ದಾಣದಲ್ಲೇ ಇದ್ದರು.

‘ಮಹದಾಯಿ, ಕಳಸಾ– ಬಂಡೂರಿ ಯೋಜನೆ ಸಂಬಂಧ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರಾಜ್ಯಪಾಲರ ಭೇಟಿಗೆ ಅವಕಾಶ ನೀಡುತ್ತಿಲ್ಲ’ ಎಂದು ರೈತ ಸೇನಾ ಸಂಘಟನೆ ರಾಜ್ಯಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಅಸಮಾಧಾನ ವ್ಯಕ್ತಪಡಿಸಿದರು.

‘ಮಹದಾಯಿ ನ್ಯಾಯಮಂಡಳಿಯು 2018ರ ಆಗಸ್ಟ್‌ನಲ್ಲಿ ತೀರ್ಪು ನೀಡಿದೆ. ರಾಜ್ಯಕ್ಕೆ ಕುಡಿಯುವ ಉದ್ದೇಶಕ್ಕಾಗಿ 5.5 ಟಿಎಂಸಿ ಅಡಿ ಹಾಗೂ ವಿದ್ಯುತ್ ಉತ್ಪಾದನೆಗೆ 8 ಟಿಎಂಸಿ ಅಡಿ ಸೇರಿ ಒಟ್ಟು 13.5 ಟಿಎಂಸಿ ಅಡಿ ನೀರನ್ನು ರಾಜ್ಯಕ್ಕೆ ನೀಡಿದೆ. ಆದರೆ, ರಾಜ್ಯ ಸರ್ಕಾರ ಇದುವರೆಗೆ ಅಧಿಸೂಚನೆ ಹೊರಡಿಸಿಲ್ಲ.ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.