ADVERTISEMENT

ರಾಘವೇಂದ್ರ ಮಯ್ಯಗೆ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ

ಕಲಾ ಕದಂಬ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಅಂಧಕ ಮೋಕ್ಷ’ ಯಕ್ಷಗಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 16:05 IST
Last Updated 12 ಅಕ್ಟೋಬರ್ 2025, 16:05 IST
ಸಮಾರಂಭದಲ್ಲಿ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು. (ನಿಂತವರು ಎಡದಿಂದ) ವಿಶ್ವನಾಥ್ ಉರಾಳ, ಗಣಪಯ್ಯ ನಾವಡ, ಕೃಷ್ಣಮೂರ್ತಿ ಅಡಿಗ, ಪ್ರಕಾಶ್ ಭಟ್, ಕೆ.ಈ. ರಾಧಾಕೃಷ್ಣ, ರಾಧಾಕೃಷ್ಣ ಉರಾಳ, ಶಿವಾನಂದ ಕೋಟ ಮತ್ತು ಮುರುಳೀಧರ ನಾವಡ ಪಾಲ್ಗೊಂಡಿದ್ದರು
-ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು. (ನಿಂತವರು ಎಡದಿಂದ) ವಿಶ್ವನಾಥ್ ಉರಾಳ, ಗಣಪಯ್ಯ ನಾವಡ, ಕೃಷ್ಣಮೂರ್ತಿ ಅಡಿಗ, ಪ್ರಕಾಶ್ ಭಟ್, ಕೆ.ಈ. ರಾಧಾಕೃಷ್ಣ, ರಾಧಾಕೃಷ್ಣ ಉರಾಳ, ಶಿವಾನಂದ ಕೋಟ ಮತ್ತು ಮುರುಳೀಧರ ನಾವಡ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಲಾ ಕದಂಬ ಆರ್ಟ್ ಸೆಂಟರ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದ‌ಲ್ಲಿ ಯಕ್ಷಗಾನ  ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಈ ಪ್ರಶಸ್ತಿ ಪ್ರದಾನ ಮಾಡಿದ ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾಕೃಷ್ಣ, ‘ಯಕ್ಷಗಾನದ ಮೂಲವೇ ಭಕ್ತಿಯಾಗಿದ್ದು, ಇದು ಭಕ್ತಿಯನ್ನು ಪಸರಿಸಲಿದೆ. ಈ ಕಲೆಯು ವಿಮರ್ಶೆಗೆ ತನ್ನನ್ನು ತಾನು ಒಡ್ಡಿಕೊಂಡು, ಭಾಷೆ, ಸಾಹಿತ್ಯ ಮತ್ತು ಮೌಲ್ಯವನ್ನು ಬಿಂಬಿಸಲಿದೆ. ಇದು ಪರಿಪೂರ್ಣ ಕಲೆಯಾಗಿದೆ. ಯಕ್ಷಗಾನಕ್ಕೆ ತಾರಾ ಮೆರಗು ನೀಡಿದವರು ಕಾಳಿಂಗ ನಾವಡರು. ಅವರು ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಅವರ ಕೊಡುಗೆ ಬಹುದೊಡ್ಡದು’ ಎಂದು ಹೇಳಿದರು.

‘ಯಕ್ಷಗಾನ ಕ್ಷೇತ್ರದಲ್ಲಿ ಹಲವು ಸಾಧಕರಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಕೆಲಸ ಹೆಚ್ಚಬೇಕು. ಈ ವಿಚಾರದಲ್ಲಿ ಕಲಾ ಕದಂಬ ಆರ್ಟ್ ಸೆಂಟರ್ ಕಾರ್ಯ ಶ್ಲಾಘನೀಯ. ಯಕ್ಷಗಾನ ಕ್ಷೇತ್ರಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿ’ ಎಂದು ಆಶಿಸಿದರು.

ADVERTISEMENT

ಕಾಳಿಂಗ ನಾವಡ ಅವರ ಹೆಸರಿನ ಪ್ರಶಸ್ತಿ ದೊರೆತಿರುವುದಕ್ಕೆ ರಾಘವೇಂದ್ರ ಮಯ್ಯ ಹಾಲಾಡಿ ಸಂತಸ ವ್ಯಕ್ತಪಡಿಸಿದರು. ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಯುವ ವಿಪ್ರ ವೇದಿಕೆ ಸಂಸ್ಥಾಪನಾಧ್ಯಕ್ಷ ಕೃಷ್ಣಮೂರ್ತಿ ಅಡಿಗ, ಶಿವಳ್ಳಿ ಸ್ಮಾರ್ಥ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಭಟ್,  ಚಂಡೆ ವಾದಕ ಶಿವಾನಂದ ಕೋಟ, ಕಲಾ ಕದಂಬ ಆರ್ಟ್ ಸೆಂಟರ್‌ ನಿರ್ದೇಶಕ ರಾಧಾಕೃಷ್ಣ ಉರಾಳ, ಕಾರ್ಯದರ್ಶಿ ಮುರುಳೀಧರ ನಾವಡ, ಖಜಾಂಚಿ ವಿಶ್ವನಾಥ್ ಉರಾಳ ಉಪಸ್ಥಿತರಿದ್ದರು.

ಈ ಸಮಾರಂಭದ ಬಳಿಕ ‘ಅಂಧಕ ಮೋಕ್ಷ’ ಯಕ್ಷಗಾನ ಪ್ರದರ್ಶನ ಕಂಡಿತು. ಹಿಮ್ಮೇಳದಲ್ಲಿ ಸುಬ್ರಾಯ ಹೆಬ್ಬಾರ್, ಅಕ್ಷಯ್ ಆಚಾರ್, ಶ್ರೀನಿವಾಸ ಪ್ರಭು ಪಾಲ್ಗೊಂಡಿದ್ದರು. ಮುಮ್ಮೇಳದಲ್ಲಿ ಅಂಬರೀಷ್ ಭಟ್, ಭರತ್ ಕಾರ್ಕಳ, ದಿನೇಶ್ ಕನ್ನಾರ್, ದೇವರಾಜ ಕರಬ, ವಿನಯ್ ಹೊಸ್ತೋಟ, ಶಶಿಕಾಂತ್ ಆಚಾರ್ಯ ಹಾಲಾಡಿ, ಪೂಜಾ ಆಚಾರ್ಯ, ನಿತ್ಯಾ ಗೌಡ ಹಾಗೂ ವರ್ಣ ಶೆಟ್ಟಿ ಅವರು ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.