ADVERTISEMENT

‘ಕಲ್ಮನೆ ಕಾಫಿ’ ಮಾಲೀಕ ಅವಿನಾಶ್‌ ಬಂಧನ

200 ಗ್ರಾಹಕರಿಂದ ₹100 ಕೋಟಿ ಸಂಗ್ರಹಿಸಿ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 20:13 IST
Last Updated 3 ಜನವರಿ 2019, 20:13 IST
ಅವಿನಾಶ್ ಪ್ರಭು
ಅವಿನಾಶ್ ಪ್ರಭು   

ಬೆಂಗಳೂರು: ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ನಿರ್ಮಿಸಿ ಫ್ಲ್ಯಾಟ್‌ ಕೊಡುವುದಾಗಿ ಹೇಳಿ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದ ಆರೋಪದಡಿ ಉದ್ಯಮಿ ಅವಿನಾಶ್‌ ಪ್ರಭು ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕಲ್ಮನೆ ಕಾಫಿ’ ಮಳಿಗೆಗಳ ಮಾಲೀಕರಾದ ಅವಿನಾಶ್, ‘ಸ್ಕೈಲೈನ್ ಕನ್‌ಸ್ಟ್ರಕ್ಷನ್ ಆಂಡ್ ಹೌಸಿಂಗ್’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ. ಅವರ ಮನೆ ಮೇಲೆ ದಾಳಿ ನಡೆಸಿ ಮೂರು ಐಷಾರಾಮಿ ಕಾರುಗಳು ಹಾಗೂ ನೂರಾರು ಕೋಟಿ ಮೊತ್ತದ ಆಸ್ತಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

‘ಅವಿನಾಶ್ ಅವರ ಪೋಷಕರು, ಕಾಫಿ ಎಸ್ಟೇಟ್ ಹಾಗೂ ಕೃಷಿ ಭೂಮಿ ಹೊಂದಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಕಾಲೇಜೊಂದರಲ್ಲಿ ಪದವಿ ಪೂರ್ಣಗೊಳಿಸಿದ್ದರು. ನಂತರ, ‘ಸ್ಕೈಲೈನ್ ಕನ್‌ಸ್ಟ್ರಕ್ಷನ್ ಆಂಡ್ ಹೌಸಿಂಗ್ ಕಂಪನಿ ಆರಂಭಿಸಿ ನಗರದಲ್ಲೇ ನೆಲೆಸಿದ್ದರು’ ಎಂದರು.

ADVERTISEMENT

‘ಲ್ಯಾವೆಲ್ಲೆ ರಸ್ತೆಯಲ್ಲಿ ಕಂಪನಿಯ ಕಚೇರಿ ತೆರೆದಿದ್ದ ಆರೋಪಿ, ಸಹೋದರ ಧೀರಜ್‌ ಜೊತೆ ಸೇರಿ ಅಪಾರ್ಟ್‍ಮೆಂಟ್‍ ಸಮುಚ್ಚಯಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದರು. ಆ ಬಗ್ಗೆ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆದಿದ್ದರು’ ‘ಫ್ಲ್ಯಾಟ್‌ ಖರೀದಿಸಲು ಇಚ್ಛಿಸುತ್ತಿದ್ದ ಗ್ರಾಹಕರಿಂದ ಶೇ 90ರಷ್ಟು ಹಣವನ್ನು ಮುಂಗಡವಾಗಿ ಪಡೆದುಕೊಳ್ಳುತ್ತಿದ್ದರು. ತಳಪಾಯ ಹಾಗೂ ಮೊದಲ ಮಹಡಿಯನ್ನಷ್ಟೇ ನಿರ್ಮಿಸಿ, ಅದನ್ನೇ ಗ್ರಾಹಕರಿಗೆ ತೋರಿಸಿ ಬಾಕಿ ಹಣ ಪಡೆದುಕೊಳ್ಳುತ್ತಿದ್ದರು. ಅದಾದ ನಂತರ, ಕಟ್ಟಡ ನಿರ್ಮಾಣ ಕೆಲಸವನ್ನೇ ಬಂದ್ ಮಾಡಿ ತಲೆಮರೆಸಿಕೊಂಡಿದ್ದರು’ ಎಂದರು.

₹100 ಕೋಟಿ ವಂಚನೆ: ‘ಆರೋಪಿಯಿಂದ ವಂಚನೆಗೀಡಾಗಿದ್ದ ಕ್ರಿಸ್ಟೋಫರ್ ರೀಗಲ್ ಎಂಬುವರು ಸೇರಿದಂತೆ ಹತ್ತು ಮಂದಿ, ಹೆಣ್ಣೂರು ಠಾಣೆಗೆ ದೂರು ನೀಡಿದ್ದರು. ಆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಲಾಗಿತ್ತು. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಅಲೋಕ್‌
ಕುಮಾರ್ ತಿಳಿಸಿದರು.

‘ಸುಮಾರು 200 ಮಂದಿಯಿಂದ ₹100 ಕೋಟಿಯನ್ನು ಆರೋಪಿ ಸಂಗ್ರಹಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’. ಜನರನ್ನು ವಂಚಿಸಿ ಗಳಿಸಿದ್ದ ಹಣದಲ್ಲೇ ಆರೋಪಿ, ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಜಮೀನು ಖರೀದಿಸಿದ್ದಾರೆ. ‘ಕಲ್ಮನೆ ಕಾಫಿ’ ಮಳಿಗೆಗಳಲ್ಲೂ ಹೂಡಿಕೆ ಮಾಡಿದ್ದಾರೆ’ ಎಂದರು. ‘ಆರೋಪಿಯ 15 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಅವಿನಾಶ್‌ ಅವರ ಸಹೋದರ ಧೀರಜ್‌ ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಅಲೋಕ್‌ಕುಮಾರ್ ಹೇಳಿದರು.

ಆರೋಪಿ ಆರಂಭಿಸಿದ್ದ ಯೋಜನೆಗಳು

*ಕೆ.ನಾರಾಯಣಪುರದಲ್ಲಿ ‘ಸ್ಕೈಲೈನ್ ಔರಾ-100’

* ಹೊರಮಾವುವಿನಲ್ಲಿ ‘ಸ್ಕೈಲೈನ್ ರಿಟ್ರೀಟ್-87’

* ಹೆಣ್ಣೂರು ಮುಖ್ಯರಸ್ತೆಯಲ್ಲಿ ‘ಸ್ಕೈಲೈನ್ ಅಕೇಶಿಯಾ -40‘

* ರೇಸ್ ಹೌಸ್ ರಸ್ತೆಯಲ್ಲಿ ‘ಸ್ಕೈಲೈನ್ ವಿಲ್ಲಾ ಮಾರಿಯಾ’

* ಯಲಹಂಕ ಬಳಿ ‘ಸ್ಕೈಲೈನ್ ವಾಟರ್ ಫ್ರಂಟ್ - 78‘

* ಮಂಗಳೂರಿನಲ್ಲಿ ‘ಸ್ಕೈಲೈನ್ ಬ್ಲೂಬೇರಿ - 30’ ಹಾಗೂ ‘ಬೆಸ್ಟ್ ಹೌಸ್-06’

ಆರೋಪಿ ಖರೀದಿಸಿರುವ ಜಮೀನು

*ಕೆಂಗೇರಿಯಲ್ಲಿ 5 ಎಕರೆ

* ಅಲ್ಲಾಳಸಂದ್ರ–ಹೆಣ್ಣೂರಿನಲ್ಲಿ ತಲಾ 3 ಎಕರೆ

* ಕನಕಪುರ ಬಳಿ 7 ಎಕರೆ

* ಮಂಗಳೂರಿನಲ್ಲಿ 8.5 ಎಕರೆ

* ಚೆನ್ನೈ ನೆಲ್ಸನ್ ಮಾಣಿಕ್ಯಂ ರಸ್ತೆಯಲ್ಲಿ ಅರ್ಧ ಎಕರೆ

ಮನೆ ಬಾಡಿಗೆ ₹1 ಲಕ್ಷ !

‘ರಿಚ್ಮಂಡ್ ವೃತ್ತ ಬಳಿಯ ಬೆಂಗಳೂರು ಕ್ಲಬ್‌ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಅವಿನಾಶ್‌ ನೆಲೆಸಿದ್ದಾರೆ. ಅವರು ತಮ್ಮ ಫ್ಲ್ಯಾಟ್‌ಗೆ ತಿಂಗಳಿಗೆ ₹1 ಲಕ್ಷ ಪಾವತಿ ಮಾಡುತ್ತಾರೆ. ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ’ ಎಂದು ತನಿಖಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.