ADVERTISEMENT

‘ಕಾವೇರಿ ನೀರಲ್ಲಿ ಚರಂಡಿ ನೀರು’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:07 IST
Last Updated 25 ಮಾರ್ಚ್ 2019, 20:07 IST

ಬೆಂಗಳೂರು: ‘ಕಾವೇರಿ ನೀರಿನೊಂದಿಗೆ ಒಳಚರಂಡಿ ನೀರು ಮಿಶ್ರಣವಾಗಿ ಮನೆಗಳಿಗೆ ಸೋಮವಾರ ಬೆಳಿಗ್ಗೆ ಸರಬರಾಜು ಆಗಿದೆ’ ಎಂದು ಕಲ್ಯಾಣನಗರದ ಎಚ್‌ಆರ್‌ಬಿಆರ್‌ ಬಡಾವಣೆಯ 2ನೇ ಬ್ಲಾಕ್‌ನ ನಿವಾಸಿಗಳು ದೂರಿದ್ದಾರೆ.

‘ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನೀರು ಪೂರೈಕೆ ಆರಂಭವಾಯಿತು. ಅದರಲ್ಲಿ ಮೂತ್ರದ ವಾಸನೆಯೂ ಬರುತ್ತಿತ್ತು. ಇದರಿಂದ ದಿನಬಳಕೆ, ಅಡುಗೆಗಾಗಿ ನೀರಿಲ್ಲದೆ ಪ್ರದೇಶದ ಸುಮಾರು 50ಕ್ಕೂ ಹೆಚ್ಚು ಮನೆಗಳ ನಿವಾಸಿಗಳಿಗೆ ಬಹಳ ತೊಂದರೆಯಾಯಿತು’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

‘ಈ ಕುರಿತು ಸಹಾಯಕ ಎಂಜಿನಿಯರ್‌ಗೆ ತಿಳಿಸಲು ಪ್ರಯತ್ನಿಸಿದರೂ, ಕರೆ ಹೋಗಲಿಲ್ಲ. ಸ್ಥಳೀಯ ಸೇವಾಕೇಂದ್ರಕ್ಕೆ ಹೋಗಿ ತಿಳಿಸಿದೆವು. ಅವರೂ ತಕ್ಷಣಕ್ಕೆ ಸ್ಪಂದಿಸಲಿಲ್ಲ. ಎಂಜಿನಿಯರ್‌ ಚುನಾವಣಾ ಕೆಲಸಕ್ಕೆ ಹೋಗಿದ್ದಾರೆ ಎಂದು ಹಾರಿಕೆ ಉತ್ತರ ನೀಡಿದರು’ ಎಂದು ಅವರು ಹೇಳಿದರು.

ADVERTISEMENT

‘ಸರಬರಾಜಾದ ನೀರಿನ್ನು ಬಾಟಲಿಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ. ಜಲಮಂಡಳಿ ಪರೀಕ್ಷೆಗಾಗಿ ಕೇಳಿದರೆ ಅದನ್ನು ಕೊಡುತ್ತೇವೆ’ ಎಂದರು.

ಈ ಕುರಿತು ಜಲಮಂಡಳಿಯ ಮುಖ್ಯ ಎಂಜಿನಿಯರ್‌(ನಿರ್ವಹಣೆ) ಬಿ.ಸಿ.ಗಂಗಾಧರ್‌ ಅವರನ್ನು ಕೇಳಿದಾಗ,‘ಈ ಬಗ್ಗೆ ದೂರು ದಾಖಲಾಗಿಲ್ಲ. ಸೇವಾಕೇಂದ್ರದ ಸಿಬ್ಬಂದಿಯನ್ನು ವಿಚಾರಿಸಿ, ನೀರಿನ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುವಂತೆ ಸೂಚಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.