ADVERTISEMENT

ಜೈಲಿನಲ್ಲಿ ಸ್ನೇಹ: ಹೊರಬಂದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 19:23 IST
Last Updated 29 ಮಾರ್ಚ್ 2022, 19:23 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಇಬ್ಬರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವೆಂಕಟೇಶ್ ಹಾಗೂ ಮಂಜುನಾಥ್ ಬಂಧಿತರು. ಅವರಿಂದ ₹ 5.25 ಲಕ್ಷ ಮೌಲ್ಯದ 105 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು, ಅಪರಾಧ ಹಿನ್ನೆಲೆಯುಳ್ಳವರು. ಕೆಲ ತಿಂಗಳ ಹಿಂದಷ್ಟೇ ಪ್ರತ್ಯೇಕ ಪ್ರಕರಣಗಳಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಆರೋಪಿಗಳು, ಅಲ್ಲಿಯೇ ಪರಸ್ಪರ ಸ್ನೇಹಿತರಾಗಿದ್ದರು.’

ADVERTISEMENT

‘ಕಳ್ಳತನ ಮಾಡುವ ಸಂಬಂಧ ಜೈಲಿನಲ್ಲೇ ಸಂಚು ರೂಪಿಸಿದ್ದರು. ತಿಂಗಳ ಹಿಂದಷ್ಟೇ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದ ಆರೋಪಿಗಳು, ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಸರಗಳವು ಮಾಡಿದ್ದರು. ಕಾಮಾಕ್ಷಿಪಾಳ್ಯ ನಿವಾಸಿಯೊಬ್ಬರು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದಾಗ, ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.

‘ಮನೆಗಳಲ್ಲಿ ಕಳ್ಳತನ ಎಸಗಿದ್ದ ಮಾಹಿತಿಯೂ ಇದೆ. ಕಸ ಬಿದ್ದಿರುತ್ತಿದ್ದ ಹಾಗೂ ರಂಗೊಲಿ ಹಾಕಿರದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿದ್ದರು. ಪೀಣ್ಯ, ಚಿತ್ರದುರ್ಗ ಹಾಗೂ ಇತರೆ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.