ADVERTISEMENT

ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ₹1.30 ಲಕ್ಷ ಕದ್ದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 6:02 IST
Last Updated 28 ಡಿಸೆಂಬರ್ 2021, 6:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾರಿನಲ್ಲಿ ಟೆಂಪೊವನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ ಟೆಂ‍ಪೊ ಅಡ್ಡಗಟ್ಟಿ ಚಾಲಕನ ಬಳಿ ಇದ್ದ ₹1.30 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೋಟಪ್ಪ ಹಾಗೂ ಇತರ ಇಬ್ಬರು ನಾಮಕಲ್‌ನಿಂದ ಕೋಳಿಗಳನ್ನು ಟೆಂಪೊದಲ್ಲಿ ತುಂಬಿಕೊಂಡು ಪ್ರತಿಬಾರಿಯೂ ನಗರಕ್ಕೆಬರುತ್ತಿದ್ದರು. ಅವುಗಳನ್ನು ಲಗ್ಗೆರೆ,ಹೆಗ್ಗನಹಳ್ಳಿ, ಸುಂಕದಕಟ್ಟೆ ಸೇರಿದಂತೆ ವಿವಿಧೆಡೆ ಅಂಗಡಿಗಳಿಗೆ ಸರಬರಾಜು ಮಾಡಿ ಅವರಿಂದ ಹಣ ಪಡೆದು ಹೋಗುತ್ತಿದ್ದರು. ಭಾನುವಾರ ರಾತ್ರಿ 12.30ರ ಸುಮಾರಿಗೆ ಕೋಳಿಗಳು ತುಂಬಿದ್ದ ಟೆಂ‍ಪೊದೊಂದಿಗೆ ನಗರಕ್ಕೆ ಬಂದಿದ್ದ ಅವರು ಕೋಳಿಗಳನ್ನೆಲ್ಲಾ ಅಂಗಡಿಯವರಿಗೆ ಪೂರೈಕೆ ಮಾಡಿ ಅದರಿಂದ ಸಂಗ್ರಗವಾಗಿದ್ದ ₹1.30 ಲಕ್ಷ ಹಣ ತೆಗೆದುಕೊಂಡು ಹೊರಟಿದ್ದರು. ಈ ವೇಳೆ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸುಮನಹಳ್ಳಿ ಹತ್ತಿರದ ಮಾಳಗಾಲ ಸೇತುವೆ ಬಳಿ ದುಷ್ಕರ್ಮಿಗಳು ಟೆಂಪೊವನ್ನು ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಬೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಟೆಂಪೊ ಚಾಲಕ ಕೋಟಪ್ಪ ಮೇಲೆ ಹಲ್ಲೆ ನಡೆಸಿದ್ದರು. ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.