ADVERTISEMENT

ವರ್ಗಕ್ಕೆ ಕಾರಣವಾಯ್ತಾ ‘ಮಲ್ಲೇಶ್ವರ’ ಪ್ರಭಾವ?

ವರ್ಷಕ್ಕೂ ಮುನ್ನವೇ ಭಾಸ್ಕರ್ ರಾವ್ ವರ್ಗಾವಣೆ, ನೂತನ ಕಮಿಷನರ್ ಆಗಿ ಕಮಲ್ ಪಂತ್ ನೇಮಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 20:55 IST
Last Updated 31 ಜುಲೈ 2020, 20:55 IST
ಭಾಸ್ಕರ್‌ ರಾವ್
ಭಾಸ್ಕರ್‌ ರಾವ್   

ಬೆಂಗಳೂರು: ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿ ವರ್ಷ ಪೂರ್ಣಗೊಳ್ಳಲು ಎರಡು ದಿನ ಬಾಕಿ ಇರುವಾಗಲೇ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಕಮಿಷನರ್ ವಿರುದ್ಧ ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ‌ ಮಾಡಿದ್ದ ಆರೋಪವೂ ವರ್ಗಾವಣೆಯ ಹಿಂದಿನ ಒಂದು ಕಾರಣ ಎಂದೂ ಹೇಳಲಾಗುತ್ತಿದೆ.

1990ನೇ ಐಪಿಎಸ್ ಬ್ಯಾಚ್ ಅಧಿಕಾರಿಯಾದ ಭಾಸ್ಕರ್ ರಾವ್‌ ಅವರ ಸ್ಥಾನಕ್ಕೆ ಕಮಲ್‌ ಪಂತ್‌ ವರ್ಗಾವಣೆ ಆಗಿದ್ದಾರೆ. ಇವರಿಬ್ಬರು 1990ರ ಆಗಸ್ಟ್ 20ರಂದೇ ಒಟ್ಟಿಗೆ ವೃತ್ತಿ ಆರಂಭಿಸಿದ್ದರು. ಅವರಿಬ್ಬರು ಉತ್ತಮ ಸ್ನೇಹಿತರು ಎಂಬುದು ಇಲಾಖೆಯಲ್ಲಿ ಎಲ್ಲರಿಗೂ ಗೊತ್ತಿದೆ.

ADVERTISEMENT

ವರ್ಗಾವಣೆ ಆದೇಶ ಹೊರಬೀಳು ತ್ತಿದ್ದಂತೆ ಭಾಸ್ಕರ್ ರಾವ್ ಅವರೇ ಕಮಲ್ ಪಂತ್ ಅವರಿಗೆ ಶುಭ ಕೋರಿದ್ದಾರೆ. ವರ ಮಹಾಲಕ್ಷ್ಮಿ ಹಬ್ಬ ಇದ್ದಿದ್ದರಿಂದ ಭದ್ರತೆಯಲ್ಲಿ ಲೋಪವಾಗಬಾರದೆಂಬ ಕಾರಣಕ್ಕೆ ಕಮಲ್ ಪಂತ್ ಅವರು ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಶನಿವಾರ ಬೆಳಿಗ್ಗೆ 11ಕ್ಕೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಲಾಕ್‌ಡೌನ್‌ ಪಾಸ್‌ ಗಲಾಟೆ; ಕೊರೊನಾ ವೈರಾಣು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಲಾಕ್‌ಡೌನ್‌ ಜಾರಿಗೆ ತಂದಿತ್ತು. ಅದೇ ಸಂದರ್ಭದಲ್ಲೇ ಭಾಸ್ಕರ್ ರಾವ್, ಬೆಂಗಳೂರಿನಲ್ಲಿ ಅಗತ್ಯ ಸೇವೆ ಸಲ್ಲಿಸುವವರಿಗೆ ಪಾಸ್‌ ವ್ಯವಸ್ಥೆ ಮಾಡಿದ್ದರು. ಅದೇ ವಿಚಾರವಾಗಿ ಸ್ಥಳೀಯ ಜನಪ್ರತಿನಿಧಿಗಳು, ರಾಜಕಾರಣಿಗಳ ನಡುವೆ ಗಲಾಟೆ ಶುರುವಾಗಿತ್ತು.

‘ಕಮಿಷನರ್ ಹಾಗೂ ಪೊಲೀಸರುತಮಗೆ ಬೇಕಾದವರಿಗೆ ಪಾಸ್‌ ನೀಡುತ್ತಿದ್ದಾರೆ. ಆಹಾರ ಸರಬ ರಾಜು ಮಾಡುವ ಹುಡುಗರಿಗೆ ಹೆಚ್ಚಿನ ಪಾಸ್ ನೀಡುತ್ತಿಲ್ಲ’ ಎಂದು ಗೃಹ ಸಚಿವರ ಸಭೆಯಲ್ಲೇ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಆರೋಪಿಸಿದ್ದರು. ಇದರಿಂದ ನೊಂದಿದ್ದ ಭಾಸ್ಕರ್ ರಾವ್, ಸಭೆಯಿಂದ ಹೊರ ಬಂದಿದ್ದರು.ಅದಾದ ನಂತರ ನಡೆದ ಬೆಳವಣಿಗೆಯಿಂದಾಗಿ ಕಮಿಷನರ್ ವರ್ಗಾವಣೆಗೆ ಒತ್ತಡವೂ ಹೆಚ್ಚಾಗಿತ್ತು.

ಸಾಮಾಜಿಕ ಜಾಲತಾಣ ಹಾಗೂ ಅಶ್ವತ್ಥನಾರಾಯಣ ಪ್ರತಿನಿಧಿಸುವ ಮಲ್ಲೇಶ್ವರ ಕ್ಷೇತ್ರದಲ್ಲಿ ಭಾಸ್ಕರ್ ರಾವ್ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದು ಸಹ ವರ್ಗಾವಣೆಗೆ ಕಾರಣ ಆಗಿರುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಇಲಾಖೆಯಲ್ಲಿ ನಡೆದಿವೆ.

ಕೆಲ ಪ್ರಕರಣಗಳಲ್ಲಿ ಭಾಸ್ಕರ್ ರಾವ್, ನಿಷ್ಠುರವಾಗಿ ಕೆಲಸ ಮಾಡಿದ್ದರು. ಇದು ಸ್ಥಳೀಯ ಕೆಲ ಶಾಸಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅವರು ಸಹ ವರ್ಗಾವಣೆ ಹಿಂದೆ ಕೆಲಸ ಮಾಡಿರುವ ಮಾತುಗಳು ಇವೆ.

ಕಮಲ್ ಪಂತ್ ಪರಿಚಯ

ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಎಸ್ಪಿಯಾಗಿ ಕೆಲಸ ಮಾಡಿದ್ದ ಕಮಲ್ ಪಂತ್, ಕೋಮು ಗಲಭೆಗಳನ್ನು ನಿಯಂತ್ರಿಸುವಲ್ಲಿ ಮಹತ್ವದ ಕೆಲಸ ಮಾಡಿದ್ದರು. ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿದ್ದ ವೇಳೆಯಲ್ಲೂ ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಿದ್ದರು.
2013 ಹಾಗೂ 2014 ಚುನಾವಣೆ ಸಮಯದ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಕಮಲ್ ಪಂತ್ ತನಿಖಾ ಕಾರ್ಯವೈಖರಿಯನ್ನು ಮೆಚ್ಚಿ ಕೇಂದ್ರ ಸೇವೆಗೆ ಕರೆಸಿಕೊಂಡಿದ್ದ ಸರ್ಕಾರ, ಸಿಬಿಐ ಆರ್ಥಿಕ ವಿಭಾಗದ ಡಿಐಜಿ ಆಗಿ ವರ್ಗಾವಣೆ ಮಾಡಿತ್ತು. ನಕಲಿ ಛಾಪಾ ಕಾಗದ ಹಗರಣದ ತನಿಖೆಯನ್ನು 10 ತಿಂಗಳಿನಲ್ಲಿಯೇ ಮಾಡಿ ಮುಗಿಸಿದ್ದರು.

ಸಿಬ್ಬಂದಿ ಸಹಕಾರದಲ್ಲಿ ಕೆಲಸ: ತಮ್ಮ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ಕಮಲ್ ಪಂತ್, ‘ಸರ್ಕಾರ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧವಾಗಿದ್ಧೇನೆ. ಬೆಂಗಳೂರಿನಂಥ ಮಹಾನಗರದಲ್ಲಿ ಕಾನೂನು
ಸುವ್ಯವಸ್ಥೆ ಕಾಪಾಡಲು, ಅಪರಾಧಿಗಳನ್ನು ಮಟ್ಟಹಾಕಲು ಇಡೀ ಸಿಬ್ಬಂದಿ ಸಹಕಾರದಲ್ಲಿ ಕೆಲಸ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.