ADVERTISEMENT

‘ನಾಡಗೀತೆ: ಅನಗತ್ಯ ವಿವಾದ ಸೃಷ್ಟಿ’: ರಾ.ನಂ. ಚಂದ್ರಶೇಖರ ಬೇಸರ

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಬೇಸರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:09 IST
Last Updated 2 ಅಕ್ಟೋಬರ್ 2022, 22:09 IST
   

ಬೆಂಗಳೂರು: ‘ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಧಾಟಿ, ಸಮಯಕ್ಕೆ ಸಂಬಂಧಿಸಿದ ವಿವಾದ 18 ವರ್ಷಗಳ ಬಳಿಕ ನಿವಾರಣೆಯಾಗಿತ್ತು. ಈಗ ಮತ್ತೆ ವಿವಾದ ಸೃಷ್ಟಿಸಿ, ನ್ಯಾಯಾಲಯದ ಮೆಟ್ಟಿಲು ಏರಿರುವುದು ದುರದೃಷ್ಟಕರ’ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.

‘ರಾಜ್ಯದ ಅಸ್ಮಿತೆಯಾಗಿರುವ ನಾಡಗೀತೆಯನ್ನು ವಿವಾದಗೊಳಿಸುವುದು ಸರಿಯಲ್ಲ. ‘ಮೈಸೂರು ಅನಂತಸ್ವಾಮಿ ಅವರು ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜನೆ ಮಾಡಿದ್ದಾರೆ. ಪೂರ್ಣ ನಾಡಗೀತೆಗೆ ಸ್ವರ ಸಂಯೋಜನೆ ಮಾಡಿರುವ ಸಿ. ಅಶ್ವತ್ಥ್ ಅವರ ಧಾಟಿಯಲ್ಲಿಯೇ ಹಾಡಬೇಕು’ ಎನ್ನುವುದು ಸರಿಯಲ್ಲ. ಮೈಸೂರು ಅನಂತಸ್ವಾಮಿ ಮತ್ತು ಅಶ್ವತ್ಥ್ ಇಬ್ಬರೂ ಕನ್ನಡ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಗಾಯಕರು. ನಾಡಗೀತೆಯ ಧಾಟಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ವಾಪಸ್ ಪಡೆಯುವುದು ಸೂಕ್ತ’ ಎಂದು ಹೇಳಿದ್ದಾರೆ.

‘ಇಡೀ ದೇಶದಲ್ಲಿ ಯಾವ ರಾಜ್ಯಕ್ಕೂ ಇಲ್ಲದ ನಾಡಗೀತೆಯ ಗೌರವ ಕರ್ನಾಟಕಕ್ಕೆ ಇದೆ. ಧಾಟಿ ಮತ್ತು ಸಮಯ ನಿಗದಿಗೆ 2021ರ ಸೆಪ್ಟೆಂಬರ್‌ನಲ್ಲಿ ಎಚ್.ಆರ್. ಲೀಲಾವತಿ ಅಧ್ಯಕ್ಷತೆಯಲ್ಲಿ 18 ಮಂದಿಯ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ 2.30 ನಿಮಿಷದಲ್ಲಿ ನಾಡಗೀತೆ ಹಾಡಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಮತ್ತೆ ವಿವಾದ ಹುಟ್ಟು ಹಾಕುವುದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.