ADVERTISEMENT

Literature: ‘ವೀರಲೋಕ ಪುಸ್ತಕ ಸಂತೆ’ಗೆ ಭರ್ಜರಿ ಸ್ಪಂದನೆ

ಮೊದಲ ದಿನವೇ ಐದು ಸಾವಿರ ವಿದ್ಯಾರ್ಥಿಗಳು ಭೇಟಿ, ನೆಚ್ಚಿನ ಲೇಖಕರ ಪುಸ್ತಕ ಖರೀದಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 18:42 IST
Last Updated 14 ನವೆಂಬರ್ 2025, 18:42 IST
‘ವೀರಲೋಕ ಪುಸ್ತಕ ಸಂತೆ’ಯಲ್ಲಿ ಪುಸ್ತಕ ಖರೀದಿಯಲ್ಲಿ ಮಗ್ನರಾಗಿದ್ದ ಸಾಹಿತ್ಯಾಸಕ್ತರು
-ಪ್ರಜಾವಾಣಿ ಚಿತ್ರ:ರಂಜು ಪಿ
‘ವೀರಲೋಕ ಪುಸ್ತಕ ಸಂತೆ’ಯಲ್ಲಿ ಪುಸ್ತಕ ಖರೀದಿಯಲ್ಲಿ ಮಗ್ನರಾಗಿದ್ದ ಸಾಹಿತ್ಯಾಸಕ್ತರು -ಪ್ರಜಾವಾಣಿ ಚಿತ್ರ:ರಂಜು ಪಿ   

ಬೆಂಗಳೂರು: ವೀರಲೋಕ ಪ್ರಕಾಶನವು ಜಯನಗರದ ಶಾಲಿನಿ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರನೇ ಆವೃತ್ತಿಯ ‘ವೀರಲೋಕ ಪುಸ್ತಕ ಸಂತೆ’ಗೆ ಮೊದಲ ದಿನವಾದ ಶುಕ್ರವಾರ ಜನಸಾಗರವೇ ಹರಿದು ಬಂತು. ಓದುಗರು ತಮ್ಮ ಆಸಕ್ತಿಯ ವಿಷಯದ ಕೃತಿಗಳನ್ನು ಖರೀದಿಸಿದರು. 

84 ಪುಸ್ತಕ ಮಳಿಗೆಗಳನ್ನು ತೆರೆದಿದ್ದು, ಎಲ್ಲವೂ ಭರ್ತಿಯಾಗಿವೆ. ಕೆಲ ಪ್ರಕಾಶನದವರು ಶೇಕಡ 10ರಿಂದ 20ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯದ ಜ್ಞಾನ ಭಂಡಾರವೇ ಅಲ್ಲಿದ್ದು, ಒಂದೇ ಸೂರಿನಲ್ಲಿ ವಿವಿಧ ಪ್ರಕಾಶಗಳ, ಪ್ರಕಾರಗಳ ಸಾವಿರಾರು ಕೃತಿಗಳನ್ನು ವೀಕ್ಷಿಸಲು ಹಾಗೂ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಸಾಹಿತ್ಯ ಪ್ರಿಯರು, ಅವುಗಳನ್ನು ವೀಕ್ಷಿಸಲು ಕುಟುಂಬ ಸಮೇತ ಬಂದಿದ್ದರು.

ಆಹಾರ, ಆಟಿಕೆಗಳು, ಕರಕುಶಲ ಹಾಗೂ ಆಲಂಕಾರಿಕ ವಸ್ತುಗಳ ಮಳಿಗೆಗಳ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನೈಸರ್ಗಿಕ ಸಾಬೂನು, ಅಗರಬತ್ತಿ, ಮಕ್ಕಳ ಹಾಗೂ ಸ್ತ್ರೀಯರ ಬಟ್ಟೆಗಳು, ಬ್ಯಾಗ್‌ಗಳು ಸೇರಿ ವಿವಿಧ ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಗಮನ ಸೆಳೆದವು.

ADVERTISEMENT

ಮೈದಾನದಲ್ಲಿ ಪುಸ್ತಕ ಲೋಕವೇ ಅರಳಿದೆ. ಸಾಹಿತಿಗಳಾದ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ದ.ರಾ.ಬೇಂದ್ರೆ, ಚಂದ್ರಶೇಖರ ಕಂಬಾರ, ಯು.ಆರ್.ಅನಂತಮೂರ್ತಿ, ಎಚ್.ಎಸ್.ವೆಂಕಟೇಶಮೂರ್ತಿ ಸೇರಿದಂತೆ ಹಳೆ ಮತ್ತು ಹೊಸ ತಲೆಮಾರಿನ ಕನ್ನಡ ಸಾಹಿತ್ಯ ಲೋಕದ ಹೆಸರಾಂತ ಸಾಹಿತಿಗಳ ಪುಸ್ತಕಗಳು ಒಂದೇ ಸೂರಿನಡಿ ಓದುಗರಿಗೆ ದೊರೆತಿದ್ದು, ಸಾಹಿತ್ಯ ಪ್ರಿಯರಲ್ಲಿ ಸಂಭ್ರಮ ಮನೆ ಮಾಡಿದೆ.

ಪುಸ್ತಕ ಸಂತೆ ಪ್ರವೇಶಿಸುತ್ತಿದ್ದಂತೆ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕಟೌಟ್‌ಗಳು ಗಮನ ಸೆಳೆಯುತ್ತಿವೆ. ಪುಸ್ತಕ ಸಂತೆ ಜತೆಗೆ ಮಕ್ಕಳ ಆಟಿಕೆಗಳು, ಆಲಂಕಾರಿಕ ವಸ್ತುಗಳು, ತಿಂಡಿ–ತಿನಿಸು, ಕರಕುಶಲ ವಸ್ತು, ಖಾದಿ ವಸ್ತ್ರಗಳ ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಮೀಣ ಸೊಗಡಿನ ಸಂಸ್ಕೃತಿ ಕೂಡ ಅನಾವರಣಗೊಂಡಿದೆ. ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪುಸ್ತಕ ಸಂತೆಗೆ ಭೇಟಿ ನೀಡಿ, ಕತೆ ಪುಸ್ತಕ ಸೇರಿ ತಮಗಿಷ್ಟವಾದ ಲೇಖಕರ ಪುಸ್ತಕಗಳನ್ನು ಖರೀದಿಸಿದರು.

ಸಂತೆಯಲ್ಲಿರುವ 84 ಪುಸ್ತಕ ಮಳಿಗೆಗಳಲ್ಲೂ ಜನರು ಗಿಜಿಗುಡುತ್ತಿದ್ದರು. ನಗರದ ವಿವಿಧೆಡೆಯಿಂದ ಬಂದಿದ್ದ ಜನರು, ಮಳಿಗೆಗಳಿಗೆ ಭೇಟಿ ನೀಡಿ, ನೆಚ್ಚಿನ ಲೇಖಕರ ಪುಸ್ತಕಗಳನ್ನು ಖರೀದಿಸಿದರು. ಕನ್ನಡ ಟೀ–ಶರ್ಟ್‌, ಕನ್ನಡ ಬಾವುಟಗಳು, ಬ್ಯಾಡ್ಜ್‌ಗಳು, ಶಲ್ಯಗಳು,  ಕೈ ಗಡಿಯಾರಗಳು, ಗೋಡೆ ಗಡಿಯಾರಗಳು, ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಸೀರೆಗಳು ಪ್ರಮುಖ ಆಕರ್ಷಣೆಯಾಗಿವೆ.

ಸಾಹಿತ್ಯಾಸಕ್ತರು ಪುಸ್ತಕ ಖರೀದಿ ಜತೆಗೆ ವಿವಿಧ ತಿನಿಸುಗಳನ್ನೂ ಸವಿದರು. ಪುಟಾಣಿಗಳು ಆಟಿಕೆಗಳಲ್ಲಿ ಕುಳಿತು ಸಂಭ್ರಮಿಸಿದರು.

ಜತೆಗೆ ಕುಸುಮಾ ಆಯರಹಳ್ಳಿ, ದೀಪಾಶಂಕರ್, ಬೇಲೂರು ರಘುನಂದನ್, ಭಾರತಿ ಹೆಗಡೆ, ಶಿವಕುಮಾರ್ ಮಾವಲಿ ಅವರ ಸಂವಾದ ಕಾರ್ಯಕ್ರಮದಲ್ಲಿ ಓದುಗರು ಭಾಗವಹಿಸಿದ್ದರು. ಬೆಳಿಗ್ಗೆ ಹಂಝ ಮಲಾರ್ ಅವರ ‘ಅರ್ಧ ಹಿಂದೂ ಅರ್ಧ ಮುಸ್ಲಿಂ’ , ರೋಹಿತ್ ನಾಗೇಶ್ ಅವರ ‘ಅವಿತಿದ್ದ ಕವಿತೆಗಳು’, ರವೀಂದ್ರ ಕೊಟಕಿ ಅವರ ‘ಲವ್ ಆದ ಮೇಲೆ’ ಸೇರಿದಂತೆ ನಾಲ್ಕು ಪುಸ್ತಕಗಳು ಬಿಡುಗಡೆಯಾದವು.

ಮಧ್ಯಾಹ್ನ ನಡೆದ ಓಲೇ ವಿಭಾಗ ಕಾರ್ಯಕ್ರಮದಲ್ಲಿ ಲೇಖಕ ಬೇಲೂರು ರಾಮಮೂರ್ತಿ, ಮಳವಳ್ಳಿ ಪ್ರಸನ್ನ, ದಾದಾಪೀರ್ ಜೈಮನ್, ವಿದ್ಯಾರಶ್ಮಿ ಪೆಲತಡ್ಕ ಸೇರಿದಂತೆ ಹಲವು ಲೇಖಕ-ಲೇಖಕಿಯರು ಭಾಗವಹಿಸಿ ಸಂತೆಯ ಮೆರುಗು ಹೆಚ್ಚಿಸಿದರು. 13 ಲೇಖಕರ ಜತೆ ಮುಖಾಮುಖಿ ಮತ್ತು ಆರು ಲೇಖಕರ ಜತೆ ಸಂವಾದ ಕಾರ್ಯಕ್ರಮ ನಡೆಯಿತು. ವೀರಲೋಕದ ಹೆಮ್ಮೆಯ ಲೇಖಕರ ಭಾವಚಿತ್ರಗಳು ಆಕರ್ಷಿಸಿದವು.

ಪುಸ್ತಕ ಸಂತೆಗೆ ಭೇಟಿ ನೀಡಿದ ಓದುಗರಿಗೆ ಕೆಲ ಪ್ರಕಾಶನದವರು ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ‘ಕನ್ನಡ ಕುಲಕ್ಕೆ ಉತ್ತಮ ಪುಸ್ತಕಗಳು’, ‘ನನ್ನ ಮಾತಿನ್ನು ಮುಗಿದಿಲ್ಲ’, ‘ಸ್ವಾಸ್ಥ್ಯ ಮಹಾಬಲ’, ‘ಮಧುರ ಮೋಹನ’, ‘ಭೂಗಳ್ಳರು ಕಬಳಿಸಿದ ಜಮೀನನ್ನು ಉಳಿಸಿದ ಹೋರಾಟ’, ‘ಆಯ್ದ ಭಾವಗೀತೆಗಳು’, ‘ಕ್ಷೇತ್ರ ದರ್ಪಣ’ ಸೇರಿ ಹಲವು ಲೇಖಕರ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು.

‘ಪ್ರತಿ ಕನ್ನಡಿಗರಿಗೆ ಕನ್ನಡದ ಪುಸ್ತಕಗಳನ್ನು ತಲುಪಿಸಲು ಪ್ರಕಾಶಕರು-ಲೇಖಕರು-ಓದುಗರನ್ನು ಒಂದೆಡೆ ಸೇರಿಸುವ ಸೇತುವೆಯಾಗಿ ‘ಪುಸ್ತಕ ಸಂತೆ' ಎನ್ನುವ ಸಾಹಿತ್ಯ ಸಂತೆಯನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಓದುಗರು ಬರುವ ನಿರೀಕ್ಷೆಯಿದ್ದು, ಪ್ರಮುಖ ಲೇಖಕರೊಂದಿಗೆ ಮುಖಾಮುಖಿಗೂ ಅವಕಾಶ ಕಲ್ಪಿಸಲಾಗಿದೆ’ ಎಂದು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ತಿಳಿಸಿದರು. 

‘ಓದುಗ– ಲೇಖಕರ ಸಂವಾದ ಜತೆಗೆ 22 ಲೇಖಕರ ಪುಸ್ತಕಗಳು ಜನಾರ್ಪಣೆಯಾಗಲಿವೆ. ಮೂರು ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪೋಷಕರು ವಾರಾಂತ್ಯದಲ್ಲಿ ಮಾಲ್‌ಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಬದಲು ಪುಸ್ತಕ ಸಂತೆಗೆ ಬಂದರೆ ಇಲ್ಲಿಯೇ ಖರೀದಿಗೆ ಅವಕಾಶವಿದೆ’ ಎಂದು ಹೇಳಿದರು.

ಪುಸ್ತಕ ಸಂತೆಯ ಮಳಿಗೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ವೀರಕಪುತ್ರ ಶ್ರೀನಿವಾಸ್ ಬೊಳುವಾರು ಮೊಹಮ್ಮದ್‌ ಕುಂಞಿ ಚರ್ಚೆ ನಡೆಸಿದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಇದ್ದರು.  -ಪ್ರಜಾವಾಣಿ ಚಿತ್ರ

‘ಸದನದಲ್ಲಿ ಡಾ.ವಿಷ್ಣುವರ್ಧನ್'

ಸಂಜೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂರು ಕೃತಿಗಳು ಜನಾರ್ಪಣೆಗೊಂಡವು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್‌ ಅವರ ‘ಸದನದಲ್ಲಿ ಡಾ.ವಿಷ್ಣುವರ್ಧನ್' ಸತೀಶ್ ಹುಳಿಯಾರ್ ಅವರ ‘ಡಾ.ಎಚ್.ಎಸ್.ವಿ ಅವರ ಗೀತರೂಪಕಗಳು’ ಬೊಳುವಾರು ಮೊಹಮ್ಮದ್ ಕುಂಞಿ ಅವರ ‘ಮುತ್ತುಪ್ಪಾಡಿಯ ಮಾಟಗಾತಿ’ ಕೃತಿಗಳನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.  ಅಚ್ಚುಕಟ್ಟಾದ ವ್ಯವಸ್ಥೆ ಶಾಲಿನಿ ಮೈದಾನದಲ್ಲಿ ಪುಸ್ತಕ ಸಂತೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ.

ಪುಸ್ತಕ ಕರಕುಶಲ ವಸ್ತುಗಳು ಮತ್ತು ತಿಂಡಿ–ತಿನಿಸುಗಳಿಗೆ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ. ಮೈದಾನದಲ್ಲಿ ದೂಳು ಬಾರದಂತೆ ಹಸಿರು ಮ್ಯಾಟ್‌ ಹಾಕಲಾಗಿದ್ದು ಪುಸ್ತಕ ಖರೀದಿಸುವವರಿಗೆ ದೂಳಿನ ಸಮಸ್ಯೆ ಆಗುತ್ತಿಲ್ಲ. ವಾಹನ ನಿಲುಗಡೆ ಜಾಗದಲ್ಲೂ ದೂಳು ಬಾರದಂತೆ ಕ್ರಮ ವಹಿಸಲಾಗಿದೆ.

₹4 ಕೋಟಿ ವಹಿವಾಟು ನಿರೀಕ್ಷೆ
ಮೂರನೇ ಆವೃತ್ತಿಯ ಪುಸ್ತಕ ಸಂತೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ವಿಶೇಷವಾಗಿ ಶಾಲಾ-ಕಾಲೇಜು ಮಕ್ಕಳು ಸಂತೆಗೆ ಭೇಟಿ ನೀಡಿ ಪುಸ್ತಕ ಖರೀದಿಸಿರುವುದು ಸಂತೋಷ ಉಂಟು ಮಾಡಿದೆ. ಕಳೆದ ವರ್ಷ ₹3 ಕೋಟಿ ವಹಿವಾಟು ಆಗಿತ್ತು. ಈ ವರ್ಷ ಅಂದಾಜು ₹4 ಕೋಟಿ ವಹಿವಾಟು ನಿರೀಕ್ಷೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ಹೆಚ್ಚು ಜನರು ಭೇಟಿ ನೀಡಲಿದ್ದಾರೆ ಎಂದು ವೀರಕಪುತ್ರ ಶ್ರೀನಿವಾಸ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.