ADVERTISEMENT

‘ಮದ್ಯ’ರಾತ್ರಿ ಗಲಾಟೆ: ಸೋಮವಾರದೊಳಗೆ ವರದಿ ಸಲ್ಲಿಕೆ ಸಾಧ್ಯತೆ

ಸಿ.ಸಿ. ಟಿವಿ ದೃಶ್ಯಾವಳಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:04 IST
Last Updated 8 ಫೆಬ್ರುವರಿ 2019, 19:04 IST

ನವದೆಹಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಲ್ಲಿದ್ದ ಕೆಲವರು ಇಲ್ಲಿನ ಕರ್ನಾಟಕ ಭವನದಲ್ಲಿ ಕಳೆದ ಬುಧವಾರ ಮಧ್ಯರಾತ್ರಿ ಮದ್ಯ ಸೇವಿಸಿ ಗಲಾಟೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವಾಸಿ ಆಯುಕ್ತರು ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಸೂಚನೆಯ ಮೇರೆಗೆ ಭವನದ ಸಿಬ್ಬಂದಿ ಜೊತೆ ಸಭೆ ನಡೆಸಿ ಚರ್ಚಿಸಿದ ನಿವಾಸಿ ಆಯುಕ್ತ ನಿಲಯ್‌ ಮಿತಾಶ್‌, ಸಿ.ಸಿ. ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆಯ ಕುರಿತ ಮಾಹಿತಿ ಸಂಗ್ರಹಿಸಿದರು.

ಸೋಮವಾರದೊಳಗೆ ಈ ಕುರಿತು ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಕೆಲವು ಸರ್ಕಾರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ADVERTISEMENT

ಬುಧವಾರ ಮಧ್ಯರಾತ್ರಿ ಕರ್ನಾಟಕ ಭವನದ ಮೊದಲ ಮಹಡಿಯ ಕೊಠಡಿಯಲ್ಲಿ ಪ್ರಾಧಿಕಾರದ ನಿಯೋಗದಲ್ಲಿದ್ದ ಕೆಲವರು ಮದ್ಯ ಸೇವಿಸಿ ಹರಟೆ ಹೊಡೆದು ಗಲಾಟೆ ಮಾಡಿದ್ದರಿಂದ, ಪಕ್ಕದ ಕೊಠಡಿಯಲ್ಲಿದ್ದ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕ್ರಮ ಕೈಗೊಳ್ಳುವಂತೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮೌಖಿಕ ದೂರು ನೀಡಿದ್ದರು.

ಘಟನೆಯ ನಂತರ ನಿಲಯ್‌ ಮಿತಾಶ್‌ ಅವರು ಸ್ಥಳಕ್ಕೆ ಧಾವಿಸಿ ನ್ಯಾಯಮೂರ್ತಿಗಳಿಗೆ ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.