ADVERTISEMENT

ಪ್ರೆಸಿಡೆನ್ಸಿ ಕಾಲೇಜಿಲ್ಲಿ ಕನ್ನಡ ಕಲಾಮೇಳ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 18:23 IST
Last Updated 13 ಏಪ್ರಿಲ್ 2025, 18:23 IST
ವಿದ್ಯಾರ್ಥಿಗಳು ಜನಪದ ನೃತ್ಯ  ಪ್ರಸ್ತುತಪಡಿಸಿದರು.
ವಿದ್ಯಾರ್ಥಿಗಳು ಜನಪದ ನೃತ್ಯ  ಪ್ರಸ್ತುತಪಡಿಸಿದರು.   

ಯಲಹಂಕ: ವೇದಿಕೆಯ ಹಿಂಭಾಗದ ಬೃಹತ್‌ ಪರದೆಯಲ್ಲಿ ಜನಪದ ಪ್ರಾಕಾರಗಳ ಕಲೆಗಳ ಅನಾವರಣ, ಎಲ್ಲೆಲ್ಲೂ ರಾರಾಜಿಸುತ್ತಿದ್ದ ಕನ್ನಡದ ಧ್ವಜ, ತಳಿರುತೋರಣ, ಚಪ್ಪರ, ರಂಗೋಲಿ, ಹಳದಿ-ಕೆಂಪು ಕಾದಗಳಿಂದ ಸಿಂಗಾರಗೊಂಡಿದ್ದ ಕಾಲೇಜು ಆವರಣ, ವಿಶೇಷ ಉಡುಪುಗಳಿಂದ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು, ಹಾಡು, ನೃತ್ಯದ ಮೂಲಕ ಸಂಭ್ರಮಿಸಿದ ಯುವ ಸಮೂಹ.. ಕಾಲೇಜಿನ ತುಂಬೆಲ್ಲಾ ಕನ್ನಡಮಯ ವಾತಾವರಣ.

ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನ ಪ್ರತಿಭಾನ ಕನ್ನಡಸಂಘದ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ʼಕನ್ನಡ ಕಲಾಮೇಳ-2025ʼ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳಿವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರನಿರ್ಮಾಪಕ ಸಾ.ರಾ.ಗೋವಿಂದು, ಕಾಲೇಜಿನಲ್ಲಿ ಕನ್ನಡಮಯ ವಾತಾವರಣ ನೋಡಿ ತುಂಬಾ ಸಂತಸವಾಯಿತು. ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸುವುದರ ಜೊತೆಗೆ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನಾಂಗದ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯೆ ಕೆ.ಷರೀಫಾ ಮಾತನಾಡಿ, ಕನ್ನಡ ಎಂದರೆ ಕೇವಲ ಭಾಷೆಯಲ್ಲ; ಅದರಲ್ಲಿ ನಮ್ಮ ಬದುಕೂ ಇದೆ. ಅನ್ನದ ಮೂಲದ ಭಾಷೆಯಾಗಿ ಕನ್ನಡವನ್ನು ಅಳವಡಿಸಿಕೊಂಡಾಗ ಮಾತ್ರ ಭಾಷೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಿಂದ ಭರತನಾಟ್ಯ, ಕಿರುನಾಟಕ, ಹಾಡು, ಕುಣಿತ, ಜನಪದ ನೃತ್ಯ, ವೀಣಾವಾದನ, ಫ್ಯಾಶನ್‌ ಶೋ, ಕಲಾವಿದರಿಂದ ಜಾದೂಗಾರಿಕೆ, ಡೊಳ್ಳುಕುಣಿತ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಸಾಹಿತಿ ಟಿ.ಯಲ್ಲಪ್ಪ, ನಟಿ ಕಾರುಣ್ಯ ರಾಮ್‌, ಪ್ರೆಸಿಡೆನ್ಸಿ ಶಿಕ್ಷಣಸಂಸ್ಥೆಯ ಉಪಾಧ್ಯಕ್ಷ ಸುಹೇಲ್‌ ಅಹ್ಮದ್‌, ಪ್ರಾಂಶುಪಾಲರಾದ ಡಾ.ಪ್ರದೀಪ್‌ಕುಮಾರ್‌, ಶೈಕ್ಷಣಿಕ ಸಂಯೋಜಕ ಗೌಹರ್‌, ಎಂಬಿಎ ವಿಭಾಗದ ಡೀನ್‌ ಚಂದನ್‌ ಚಾವಡಿ, ಕನ್ನಡ ಪ್ರಾಧ್ಯಾಪಕ ಪ್ರಭುದೇವ.ಸಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.