ADVERTISEMENT

ಕಸಾಪ: ‘ಕನ್ನಡ ಮನೆ-ಕನ್ನಡದ ಮನ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 15:33 IST
Last Updated 13 ಆಗಸ್ಟ್ 2025, 15:33 IST
<div class="paragraphs"><p>ಕನ್ನಡ ಸಾಹಿತ್ಯ ಪರಿಷತ್ತು</p></div>

ಕನ್ನಡ ಸಾಹಿತ್ಯ ಪರಿಷತ್ತು

   

ಬೆಂಗಳೂರು: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ‘ಕನ್ನಡ ಮನೆ-ಕನ್ನಡದ ಮನ’ ಅಭಿಯಾನ ಹಮ್ಮಿಕೊಂಡಿದೆ. 

ಈ ಅಭಿಯಾನಕ್ಕೆ ಇದೇ 15ರಂದು ಚಾಲನೆ ದೊರೆಯಲಿದೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳುವವರು ಮನೆಗಳಲ್ಲಿ ಬಳಸುವ  ಕನ್ನಡ ಪದಗಳ ಪಟ್ಟಿಯನ್ನು ಪರಿಷತ್ತಿಗೆ ಕಳುಹಿಸಬೇಕಿದೆ. ಆ ಪದಗಳನ್ನು ಸಂಪಾದಕ ಮಂಡಳಿ ಪರಿಶೀಲಿಸಿ, ‘ನಿತ್ಯ ಕನ್ನಡದ ನಿಘಂಟು’ ಸಿದ್ಧಪಡಿಸಲಿದೆ. ಅತಿ ಹೆಚ್ಚು ಮನೆ ಬಳಕೆಯ ಕನ್ನಡ ಪದಗಳನ್ನು ಕಳಿಸಿದವರಿಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಕಸಾಪ ತಿಳಿಸಿದೆ. 

ADVERTISEMENT

‘ಕನ್ನಡದ ಅಪಾರ ಪದ ಸಂಪತ್ತನ್ನು ನಾವು ಬಳಸಿ ಉಳಿಸಿಕೊಳ್ಳಬೇಕಿದೆ. ಆದ್ದರಿಂದ ‘ಕನ್ನಡದ ಮನೆ-ಕನ್ನಡದ ಮನ’ ಎಂಬ ಅಭಿಯಾನವನ್ನು ಪರಿಷತ್ತು ಆರಂಭಿಸಲಿದೆ. ಮನೆಯಲ್ಲಿ ಬಳಕೆಯಾಗುತ್ತಿರುವ ಕನ್ನಡ ಪದಗಳ ಪಟ್ಟಿಯನ್ನು, ಕನ್ನಡ ಪದಗಳನ್ನು ಉಳಿಸಲು ಮಾಡುತ್ತಿರುವ ಪ್ರಯತ್ನವನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗುತ್ತಿದೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

‘ಮನೆಗಳಲ್ಲಿ ಬಳಕೆಯಲ್ಲಿರುವ ಪದಗಳನ್ನು ಒಟ್ಟುಗೂಡಿಸಿ, ನಿಘಂಟು ಸಿದ್ಧಪಡಿಸಲಾಗುತ್ತದೆ. ಅಧಿಕ ಅಚ್ಚಗನ್ನಡ ಪದಗಳನ್ನು ಬಳಸುವ ಮನೆಗಳನ್ನು ಗುರುತಿಸಿ, ‘ಕನ್ನಡದ ಮನೆ-ಕನ್ನಡದ ಮನ’ಎಂಬ ಅಭಿಮಾನದ ಗೌರವವನ್ನೂ ನೀಡಲಾಗುತ್ತದೆ. ನಮ್ಮ ಮನೆಗಳಲ್ಲಿ ಕನ್ನಡ ಉಳಿದರೆ ಅದು ಮನಕ್ಕೆ ತಾನಾಗಿಯೇ ಬರುತ್ತದೆ. ಆದ್ದರಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ. 

ಪದಗಳನ್ನು ಕಳುಹಿಸಬೇಕಾದ ವಿಳಾಸ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು– 560018

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.