ADVERTISEMENT

ನಾಮಫಲಕ: ‘ಕನ್ನಡ’ಕ್ಕೆ ಸಿಗದ ಪ್ರಾಧಾನ್ಯ

ಕಾನೂನು ರಚನೆ, ಗಡುವು ನಂತರವೂ ನಗರದ ವಿವಿಧ ಮಳಿಗೆಗಳ ನಾಮಫಲಕಗಳಲ್ಲಿ ಇಂಗ್ಲಿಷ್‌ಗೆ ಪ್ರಥಮ ಆದ್ಯತೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 22:42 IST
Last Updated 20 ಜುಲೈ 2025, 22:42 IST
ಅವಿನ್ಯೂ ರಸ್ತೆಯಲ್ಲಿನ ಮಳಿಗೆಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಆಂಗ್ಲ ಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ  ಪ್ರಜಾವಾಣಿ ಚಿತ್ರ
ಅವಿನ್ಯೂ ರಸ್ತೆಯಲ್ಲಿನ ಮಳಿಗೆಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಆಂಗ್ಲ ಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ  ಪ್ರಜಾವಾಣಿ ಚಿತ್ರ   

ಬೆಂಗಳೂರು: ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವಂತೆ ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸಿದ್ದರೂ, ನಗರದ ವಿವಿಧ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಈಗಲೂ ಇಂಗ್ಲಿಷ್‌ ರಾರಾಜಿಸುತ್ತಿದೆ. ನಾಮಫಲಕದಲ್ಲಿ ಕನ್ನಡ ಕಡೆಗಣನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಈವರೆಗೆ ಕೇವಲ ಆರು ಮಳಿಗೆಗಳ ಪರವಾನಗಿ ರದ್ದುಪಡಿಸಿದೆ. 

ಚರ್ಚ್‌ಸ್ಟ್ರೀಟ್‌, ಅವಿನ್ಯೂ ರಸ್ತೆ, ಎನ್‌ಆರ್‌ ರಸ್ತೆ, ಎಸ್‌ಜೆಪಿ ರಸ್ತೆ ಸೇರಿದಂತೆ ಹಲವೆಡೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ನಾಮಕಾವಸ್ತೆಗೆ ಕನ್ನಡ ಬಳಕೆ ಮಾಡಲಾಗಿದೆ. ಲೋಹ, ಫೈಬರ್‌ ಜತೆಗೆ ಅಲಂಕಾರಿಕ ವಿದ್ಯುತ್‌ ದೀಪಗಳಿಂದ ತಯಾರಿಸಿದ ಡಿಜಿಟಲ್‌, ಎಲ್‌ಇಡಿ ಪರದೆಗಳ ನಾಮಫಲಕಗಳಲ್ಲಿ ಆಂಗ್ಲ ಭಾಷೆಯಲ್ಲಿಯೇ ಮಳಿಗೆಗಳ ಹೆಸರನ್ನು ಪ್ರದರ್ಶಿಸಲಾಗುತ್ತಿದೆ. ಕನ್ನಡದ ಅಕ್ಷರಗಳನ್ನು ಮೂಲೆಗುಂಪು ಮಾಡಿ, ರೇಡಿಯಂನಲ್ಲಿ ಅಳವಡಿಸಲಾಗಿದೆ.  

ನಾಮಫಲಕಗಳಲ್ಲಿ ಕನ್ನಡ ಕಡೆಗಣನೆಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು 2023ರ ಡಿಸೆಂಬರ್ ತಿಂಗಳಲ್ಲಿ ಪ್ರತಿಭಟನೆ ನಡೆಸಿದ್ದವು. ಬಳಿಕ, ಸರ್ಕಾರವು 2024ರ ಫೆ.28ರ ಒಳಗಾಗಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ 60ರಷ್ಟು ಕನ್ನಡ ಅಳವಡಿಸಿಕೊಳ್ಳುವಂತೆ ಗಡವು ನೀಡಿತ್ತು. ಇದಾಗಿ ಒಂದೂವರೆ ವರ್ಷ ಕಳೆದರೂ ಈ ನಿಯಮ ಜಾರಿಗೆ ಬಂದಿಲ್ಲ.

ADVERTISEMENT

ಕಾನೂನಿನಡಿ ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಮಳಿಗೆಗಳು ಕೇವಲ ತೋರಿಕೆಗಾಗಿ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಂಡಿವೆ. ಕನ್ನಡ ಮತ್ತು ಆಂಗ್ಲ ಅಕ್ಷರಗಳನ್ನು ನಾಮಫಲಕಗಳಲ್ಲಿ ಏಕರೂಪ ವಿನ್ಯಾಸದಲ್ಲಿ ಅಳವಡಿಸಿಕೊಂಡಿಲ್ಲ. ಕೆಲವೆಡೆ ಮೊದಲಿದ್ದ ನಾಮಫಲಕಗಳ ಮೇಲೆ, ಕೆಳಗೆ, ಪಕ್ಕದಲ್ಲಿ ಚಿಕ್ಕದಾಗಿ ಅಥವಾ ಸಮಾನವಾಗಿ ಮತ್ತೊಂದು ಕನ್ನಡ ನಾಮಫಲಕವನ್ನು ಅಳವಡಿಸಲಾಗಿದೆ. 

‘ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇಷ್ಟಾಗಿಯೂ ವಾಣಿಜ್ಯ ಮಳಿಗೆಗಳು ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ನಮ್ಮ ಜನಪ್ರತಿನಿಧಿಗಳು ಅವರಿಗೆ ಬೆಂಬಲವಾಗಿ ನಿಂತಿರುವುದೇ ಮಳಿಗೆಗಳ ಮುಖ್ಯಸ್ಥರ ದುರಂಹಕಾರಕ್ಕೆ ಕಾರಣ’ ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರು.

ಕನ್ನಡ ಭಾಷೆ ಬಳಕೆ ಉತ್ತೇಜಿಸಲು ರಾಜ್ಯ ಸರ್ಕಾರವು 2024ರಲ್ಲಿ ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆ’ ಜಾರಿಗೆ ತಂದಿದೆ. ಕಾಯ್ದೆ ಪ್ರಕಾರ ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಶೇ 60ರಷ್ಟು ಭಾಗದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲೇ ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಪುರುಷೋತ್ತಮ ಬಿಳಿಮಲೆ
ಟಿ.ಎ. ನಾರಾಯಣಗೌಡ
ನಾಮಫಲಕಗಳಲ್ಲಿ ಕನ್ನಡ ಅಳವಡಿಕೆಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಉದಾಸೀನದಿಂದ ಕಾನೂನು ಪೂರ್ಣಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ 
ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 
ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ಮಾಡಲಾಗುತ್ತದೆ
ಟಿ.ಎ. ನಾರಾಯಣಗೌಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು

50 ಸಾವಿರ ಮಳಿಗೆಗಳಿಗೆ ನೋಟಿಸ್ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಅಳವಡಿಸಿಕೊಳ್ಳದ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಈವರೆಗೆ 50382 ಮಳಿಗೆಗಳಿಗೆ ನೋಟಿಸ್‌ ಜಾರಿ ಮಾಡಿದೆ. ಇದರಲ್ಲಿ 49995 ವಾಣಿಜ್ಯ ಮಳಿಗೆಗಳು ಸೂಚನೆಯನ್ನು ಪಾಲಿಸಿವೆ. ಉಳಿದ 387 ವಾಣಿಜ್ಯ ಉದ್ದಿಮೆಗಳು ಇನ್ನೂ ಬದಲಾವಣೆ ಮಾಡಿಕೊಂಡಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. 

ನೋಟಿಸ್ ಪಡೆದ ಮಳಿಗೆಗಳ ವಿವರ ವಲಯ; ನೋಟಿಸ್‌; ನಾಮಫಲಕ ಸರಿಪಡಿಸಿಕೊಂಡ ಮಳಿಗೆಗಳು; ಸರಿಪಡಿಸಿಕೊಳ್ಳದ ಮಳಿಗೆಗಳು; ಪರವಾನಗಿ ರದ್ದು                    

ಬೊಮ್ಮನಹಳ್ಳಿ;8411;8341;70;0

ದಾಸರಹಳ್ಳಿ; 1548;1522;26;0

ಪೂರ್ವ; 8659;8548;111;0

ಮಹದೇವಪುರ;5967;5893;74;0

ಆರ್‌ಆರ್‌ ನಗರ;6537;6492;45;0

ದಕ್ಷಿಣ;5982;5941;41;6

ಪಶ್ಚಿಮ;7113;7093;20;0

ಯಲಹಂಕ;6165;6165;0;0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.