ADVERTISEMENT

ಕಸಾಪ: ಭುವನೇಶ್ವರಿ ಪುತ್ಥಳಿ ಅನಾವರಣ ನಾಳೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:58 IST
Last Updated 15 ನವೆಂಬರ್ 2022, 20:58 IST
ಅನಾವರಣಗೊಳ್ಳಲಿರುವಭುವನೇಶ್ವರಿ ಪುತ್ಥಳಿ
ಅನಾವರಣಗೊಳ್ಳಲಿರುವಭುವನೇಶ್ವರಿ ಪುತ್ಥಳಿ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆವರಣದಲ್ಲಿ ಗುರುವಾರ ಸಂಜೆ 6.30ಕ್ಕೆ ಭುವನೇಶ್ವರಿಯ ಪುತ್ಥಳಿ ಅನಾವರಣಗೊಳ್ಳಲಿದೆ.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುತ್ಥಳಿಯನ್ನು ಅನಾವರಣ ಮಾಡಲಿದ್ದಾರೆ. ಈ ಪ್ರತಿಮೆಯು 6.5 ಅಡಿ ಎತ್ತರವಿದ್ದು, ಬೆಂಗಳೂರಿನ ಸ್ಥಪತಿ ಕ್ರಿಯೇಷನ್ಸ್‌ನ ಕಲಾವಿದ ಶಿವದತ್ತ ನಿರ್ಮಿಸಿದ್ದಾರೆ.

‘ಪರಂಪರಾಗತವಾಗಿ ಕನ್ನಡಿಗರ ಅಭಿಮಾನದ ಆರಾಧ್ಯ ದೇವತೆಯಾದ ಭುವನೇಶ್ವರಿಯ ಪುತ್ಥಳಿಯನ್ನು ಇದುವರೆಗೂ ಯಾವುದೇ ಕನ್ನಡ ಸಂಘ– ಸಂಸ್ಥೆಗಳಾಗಲಿ, ಸರ್ಕಾರವಾಗಲಿ ಸ್ಥಾಪಿಸಿಲ್ಲ. ಕನ್ನಡದ ಮೊದಲ ರಾಜವಂಶವೆಂದೇ ಖ್ಯಾತಿ ಪಡೆದ ಕದಂಬರು, ತಮ್ಮ ಕುಲದೈವವಾದ ಮಧುಕೇಶ್ವರ ಸ್ವಾಮಿಯೊಂದಿಗೆ ತಾಯಿ ಭುವನೇಶ್ವರಿಯನ್ನು ನಿತ್ಯ ಆರಾಧಿಸುತ್ತಿದ್ದರು’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

ADVERTISEMENT

‘ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿಯ ದೇಗುಲದ ನಿರ್ಮಾಣ ಕಾರ್ಯವು ಕದಂಬರ ಕಾಲದಲ್ಲಿ ಆರಂಭವಾಗಿ, ಕ್ರಿ.ಶ. 1692ರಲ್ಲಿ ಬೀಳಗಿ ಅರಸರ ಕೊನೆಯ ದೊರೆ ಬಸವೇಂದ್ರನ ಕಾಲದಲ್ಲಿ ಪೂರ್ಣಗೊಂಡಿತು. ಇದು ಕನ್ನಡ ನಾಡಿನಲ್ಲಿ ಸ್ಥಾಪನೆಗೊಂಡ ಮೊದಲ ಭುವನೇಶ್ವರಿಯ ದೇಗುಲ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ತಮ್ಮ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ‘ಭುವನೇಶ್ವರಿ ಕನ್ನಡಿಗರ ತಾಯಿ’ ಎನ್ನುವ ಪರಿಕಲ್ಪನೆ ನೀಡಿದರು. ಅದಕ್ಕೆ ಬಿ.ಎಂ.ಶ್ರೀ., ಕುವೆಂಪು, ಬೇಂದ್ರೆ ಮೊದಲಾದ ಕವಿವರ್ಯರು ಧ್ವನಿಗೂಡಿಸಿದರು’ ಎಂದು ಹೇಳಿದ್ದಾರೆ.

‘ಭುವನೇಶ್ವರಿಯ ಪರಿಕಲ್ಪನೆ ಏಕೀಕರಣದ ಹೋರಾಟದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿತು. ಇಂದಿಗೂ ಕನ್ನಡ ನುಡಿ ಮತ್ತು ಭುವನೇಶ್ವರಿಯ ಪರಿಕಲ್ಪನೆಯ ನಡುವೆ ಅವಿನಾಭಾವ ಸಂಬಂಧ ಬೆಳೆದು ಬಂದಿದೆ. ಚತುರ್ಭುಜ, ಪದ್ಮ ಪೀಠಾಸೀನ, ಪಾಶಾಂಕುಶ, ಅಭಯ ವರದ ಮುದ್ರೆಯೊಂದಿಗೆ ಕನ್ನಡ ಧ್ವಜ ಹಿಡಿದಿರುವ ಭುವನೇಶ್ವರಿ ಪ್ರತಿಮೆ ನಿರ್ಮಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.