ADVERTISEMENT

ಚುನಾವಣೆಯಲ್ಲಿ ಹಿಂದುತ್ವ ಮಾತ್ರ ನಮ್ಮ ಅಸ್ತ್ರವಲ್ಲ: ಬಿ.ವೈ ವಿಜಯೇಂದ್ರ

ಅಭಿವೃದ್ಧಿಯೇ ಚುನಾವಣೆಯಲ್ಲಿ ನಮ್ಮ ಮುಖ್ಯ ಕಾರ್ಯಸೂಚಿಯಾಗಿರುತ್ತದೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 9:34 IST
Last Updated 14 ಫೆಬ್ರುವರಿ 2023, 9:34 IST
   

ಬೆಂಗಳೂರು: ಚುನಾವಣೆಯಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಅಸ್ತ್ರಗಳನ್ನು ಪ್ರಯೋಗಿಸಬೇಕಾಗುತ್ತದೆ. ವರಿಷ್ಠರ ಸೂಚನೆಗೆ ಅನುಗುಣವಾಗಿಯೇ ಪ್ರಯೋಗಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹಿಂದುತ್ವದ ಕುರಿತ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಅಭಿವೃದ್ಧಿಯೇ ಚುನಾವಣೆಯಲ್ಲಿ ನಮ್ಮ ಮುಖ್ಯ ಕಾರ್ಯಸೂಚಿಯಾಗಿರುತ್ತದೆ. ಆದರೆ, ಬತ್ತಳಿಕೆಯಲ್ಲಿ ಹಿಂದುತ್ವವೂ ಸೇರಿ ಉಳಿದ ಅಸ್ತ್ರಗಳೂ ಇವೆ ಎಂದು ಅವರು ಹೇಳಿದರು.

ADVERTISEMENT

ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸುವ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ರಾಜ್ಯ ಮತ್ತು ಕೇಂದ್ರದ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೆ ಮತ್ತು ಮನ ಮನಕ್ಕೆ ತಲುಪಿಸಲಾಗುವುದು. 224 ವಿಧಾನಸಭಾ ಕ್ಷೇತ್ರಗಳಿಗೆ ತಲುಪುವ ಗುರಿ ಹಾಕಿಕೊಳ್ಳಲಾಗಿದೆ ಎಂದು ವಿಜಯೇಂದ್ರ ಹೇಳಿದರು.

ಇದರ ಅಂಗವಾಗಿ ಇದೇ 20 ರಂದು ಮಂಡ್ಯದಲ್ಲಿ ಯುವ‌ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇಂದ್ರದ ನಾಯಕರೂ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಇದೇ ರೀತಿ ಬೇರೆ ಬೇರೆ ಜಿಲ್ಲೆಗಳಲ್ಲಿ ಇತರ ಮೋರ್ಚಾಗಳ ಸಮಾವೇಶ ನಡೆಯಲಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಸಂಚಾಲಕ ಮತ್ತು ಸಹ ಸಂಚಾಲಕರನ್ನು ನೇಮಿಸಲಾಗಿದೆ. ಇದೇ 16 ರಂದು ವಿವಿಧ ಮೋರ್ಚಾಗಳ ರಾಜ್ಯ ಮಟ್ಟ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.

ಈ ಬಾರಿ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆ ಗಳಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಗುರಿ ಹಾಕಿಕೊಳ್ಳಲಾಗಿದೆ. ಈ ಕಾರಣಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಬೃಹತ್ ಸಭೆ ಏರ್ಪಡಿಸಿದ್ದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಯಶವಂತ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.