ADVERTISEMENT

ಸಚಿವರ ಪರಿಚಯ: ಸಿ.ಎಂ ಫಜೀತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 21:37 IST
Last Updated 18 ಫೆಬ್ರುವರಿ 2020, 21:37 IST
ವಿಧಾನಸಭೆಯಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು
ವಿಧಾನಸಭೆಯಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು   

ಬೆಂಗಳೂರು: ಹೊಸ ಸಚಿವರ ಪರಿಚಯಿಸಲು ಹೋಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಫಜೀತಿಗೆ ಸಿಲುಕಿದ ವಿದ್ಯಮಾನ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ಹೊಸ ಸಚಿವರ ಪರಿಚಯ ಮಾಡಿಕೊಡುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾವೇರಿ ಅವರು ಮುಖ್ಯಮಂತ್ರಿ ಅವರಿಗೆ ಸೂಚಿಸಿದರು. ‘ಎಸ್‌.ಟಿ. ಸೋಮಶೇಖರ್, ಸಹಕಾರ ಸಚಿವರು’, ‘ಆನಂದ್‌ ಸಿಂಗ್‌– ಅರಣ್ಯ ಸಚಿವರು’, ‘ಬೈರತಿ ಬಸವರಾಜ್‌– ನಗರಾಭಿವೃದ್ಧಿ ಸಚಿವರು’ ಎಂದು ಪರಿಚಯಿಸಲು ಆರಂಭಿಸಿದರು. ಆಗ ಸೋಮಶೇಖರ್‌, ಆನಂದ್‌ ಸಿಂಗ್‌ ಸದನದಲ್ಲಿ ಇರಲಿಲ್ಲ. ‘ಸಚಿವರು ಸದನದಲ್ಲೇ ಇಲ್ಲ. ಇಲ್ಲದ ಸಚಿವರನ್ನು ಪರಿಚಯಿಸುವುದು ಏಕೆ’ ಎಂದು ಕಾಂಗ್ರೆಸ್‌ ಸದಸ್ಯರು ಕಾಲೆಳೆದರು.

‘ಅವರೆಲ್ಲ ವಿಧಾನ ಪರಿಷತ್‌ನಲ್ಲಿ ಇದ್ದಾರೆ’ ಎಂದು ಯಡಿಯೂರಪ್ಪ ಸಮಜಾಯಿಷಿ ನೀಡಿದರು. ‘ಸದನಕ್ಕೆ ಬಂದ ಮೇಲೆ ಪರಿಚಯಿಸಿ’ ಎಂದು ಕಾಂಗ್ರೆಸ್‌ ಸದಸ್ಯರು ಹೇಳಿದರು. ‘ಅವರೆಲ್ಲ ನಮ್ಮಲ್ಲೇ ಇದ್ದವರೇ. ಅವರ ಪರಿಚಯ ಚೆನ್ನಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ADVERTISEMENT

‘ಬಿಜೆಪಿ ಸದಸ್ಯರಿಗೆ ಅವರ ಪರಿಚಯ ಅಷ್ಟಾಗಿ ಇಲ್ಲ. ಪರಿಚಯ ಮಾಡಿಕೊಡಲಿ ಬಿಡಿ’ ಎಂದು ಕಾಂಗ್ರೆಸ್‌ ಸದಸ್ಯರು ಕಾಲೆಳೆದರು. ‘ಪರಿಚಯ ಮಾಡುವಾಗ ಬಿಜೆಪಿ ಸದಸ್ಯರು ಮೌನವಾಗಿರುವುದನ್ನು ನೋಡಿದರೆ ಅವರು ಖುಷಿಯಾಗಿದ್ದಂತೆ ಇಲ್ಲ’ ಎಂದು ರಾಮಲಿಂಗಾ ರೆಡ್ಡಿ ಕಿಚಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.