ADVERTISEMENT

ಅನುದಾನ ಕೊಟ್ಟರೂ ಪಕ್ಷಕ್ಕೆ ಕೈಕೊಟ್ಟರು: ಅನರ್ಹರ ವಿರುದ್ಧ ದೇವೇಗೌಡರ ವಾಗ್ದಾಳಿ

ಮಹಾಲಕ್ಷ್ಮಿ ಲೇಔಟ್‌ ಪ್ರಚಾರದಲ್ಲಿ ದೇವೇಗೌಡರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 2:20 IST
Last Updated 29 ನವೆಂಬರ್ 2019, 2:20 IST
ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಗುರುವಾರ ಬಹಿರಂಗ ಪ್ರಚಾರದ ವೇಳೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ದೇವರಿಗೆ ಆರತಿ ಮಾಡಿದ ಅರ್ಚಕರೊಬ್ಬರಿಗೆ ₹ 500 ದಕ್ಷಿಣೆ ನೀಡಿದರು. ಅಭ್ಯರ್ಥಿ ಡಾ.ಗಿರೀಶ್‌ ಕೆ.ನಾಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌ ಇದ್ದರು.   ಪ್ರಜಾವಾಣಿ ಚಿತ್ರ
ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಗುರುವಾರ ಬಹಿರಂಗ ಪ್ರಚಾರದ ವೇಳೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ದೇವರಿಗೆ ಆರತಿ ಮಾಡಿದ ಅರ್ಚಕರೊಬ್ಬರಿಗೆ ₹ 500 ದಕ್ಷಿಣೆ ನೀಡಿದರು. ಅಭ್ಯರ್ಥಿ ಡಾ.ಗಿರೀಶ್‌ ಕೆ.ನಾಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌ ಇದ್ದರು.   ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ನೀಡಿದ ದುಡ್ಡು ಪಡೆದುಕೊಂಡು ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಸೋಲು ಖಂಡಿತ. ಅವರಲ್ಲಿರುವ ಹಣದ ಶಕ್ತಿಯನ್ನು ಎದುರಿಸುವ ಶಕ್ತಿ ಪಕ್ಷಕ್ಕೆ ಇದೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಅಭ್ಯರ್ಥಿ ಡಾ.ಗಿರೀಶ್ ಕೆ.ನಾಶಿ ಅವರ ಪರವಾಗಿ ಗುರುವಾರ ಪ್ರಚಾರ ಜಾಥಾದಲ್ಲಿ ಮಾತನಾಡಿದ ಅವರು, ‘ಪಕ್ಷಕ್ಕೆ ವಂಚಿಸಿದವರನ್ನು ಸೋಲಿಸುವ ಪಣ ತೊಟ್ಟಿದ್ದೇನೆ. ಹೀಗಾಗಿ, ನಾನೇ ಕ್ಷೇತ್ರದಲ್ಲಿ ಕಣಕ್ಕೆ ಇಳಿದು ಚುನಾವಣೆ ಎದುರಿಸುತ್ತಿದ್ದೇನೆ ಎಂಬ ಭಾವನೆಯೊಂದಿಗೆ ಇಲ್ಲಿ ಪ್ರಚಾರಕ್ಕೆ ಬಂದಿದ್ದೇನೆ. ಇದು ನಮ್ಮ ಸ್ವಾಭಿಮಾನದ ವಿಚಾರ’ ಎಂದರು.

‘ಗೋಪಾಲಯ್ಯ ಅವರಿಗೆ ಅನುದಾನ ಕೊಟ್ಟದ್ದು ಮಾತ್ರವಲ್ಲ, ಅವರ ಪತ್ನಿಯನ್ನು ಉಪಮೇಯರ್ ಮಾಡಲಾಯಿತು. ಕೊಟ್ಟ ದುಡ್ಡು ಬಳಸಿಕೊಂಡಿದ್ದರೆ ಕ್ಷೇತ್ರ ಸಿಂಗಪುರವಾಗಬೇಕಿತ್ತು. ಆದರೆ ದುಡ್ಡು ಎಲ್ಲಿಗೆ ಹೋಯಿತು? ಉಪಮೇಯರ್ ಎಷ್ಟು ಅನುದಾನ ಖರ್ಚು ಮಾಡಿದ್ದಾರೆ? ಅವರಿಬ್ಬರೂನಿಜವಾಗಿಯೂ ಅನುದಾನ ಖರ್ಚು ಮಾಡಿದ್ದಾರಾ ಎಂಬ ಸಂಶಯ ಬರುತ್ತಿದೆ.ದುಡ್ಡು ಕೊಟ್ಟಿಲ್ಲ ಎನ್ನುವವರು ಇಲ್ಲಿನ ಶನೀಶ್ಚರ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

ಅಭ್ಯರ್ಥಿಡಾ. ಗಿರೀಶ್ ನಾಶಿ, ನಾಗಮಂಗಲದ ಶಾಸಕ ಸುರೇಶ್‌ ಗೌಡರ ಜತೆಗೆ ರೋಡ್‌ಶೋ ನಡೆಸಿದ ಗೌಡರು, ಹಲವು ಕಡೆಗಳಲ್ಲಿ ಚಿಕ್ಕದಾಗಿ ಭಾಷಣಗಳನ್ನು ಮಾಡಿದರು. ಜಾಥಾದಲ್ಲಿನೂರಾರು ಅಭಿಮಾನಿಗಳು ದ್ವಿಚಕ್ರ ವಾಹನಗಳಲ್ಲಿ ಪಾಲ್ಗೊಂಡರು.

ಇಂದು ಕುಮಾರಸ್ವಾಮಿ ಪ್ರಚಾರ: ಜೆಡಿಎಸ್‌ ಶಾಸಕಾಂಗ‍ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆಯಿಂದಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.