ADVERTISEMENT

ಚಿತ್ರಕಲಾ ಪರಿಷತ್‌ನಲ್ಲಿ ಕುಂಚ ಕಾವ್ಯ ಅನಾವರಣ: ಕಲಾಸಕ್ತರಿಗೆ ರಸದೌತಣ

₹2 ಕೋಟಿ ವಹಿವಾಟು: 2 ಲಕ್ಷಕ್ಕೂ ಅಧಿಕ ಕಲಾಸಕ್ತರ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 19:49 IST
Last Updated 27 ಮಾರ್ಚ್ 2022, 19:49 IST
ಬೆಂಗಳೂರಿನಲ್ಲಿ ಭಾನುವಾರ ನಡೆದ ಚಿತ್ರಸಂತೆಯಲ್ಲಿ ಕಂಡುಬಂದ ಜನಸ್ತೋಮ -–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ ನಡೆದ ಚಿತ್ರಸಂತೆಯಲ್ಲಿ ಕಂಡುಬಂದ ಜನಸ್ತೋಮ -–ಪ್ರಜಾವಾಣಿ ಚಿತ್ರ   

ಬೆಂಗಳೂರು: ಐತಿಹಾಸಿಕ ತಾಣಗಳು, ವನ್ಯಜೀವಿಗಳು, ಗ್ರಾಮೀಣ ಜನಜೀವನದ ನೋಟ, ದೇವರ ಚಿತ್ರಗಳು, ಮಹಿಳೆಯ ಭಾವಗಳು, ಜಾನಪದ ಸಂಸ್ಕೃತಿ, ಖುಜುರಾಹೋ ಶಿಲ್ಪಕಲೆ.... ಒಂದೇ ಎರಡೇ, ಇಂತಹ ಸಾವಿರಾರು ಕಲಾಕೃತಿಗಳು ಅಲ್ಲಿಅನಾವರಣಗೊಂಡಿದ್ದವು.

ಕರ್ನಾಟಕ ಚಿತ್ರಕಲಾ ಪರಿಷತ್ತು‘ಎಲ್ಲರಿಗಾಗಿ ಕಲೆ' ಎಂಬ ಧ್ಯೇಯವಾಕ್ಯ ದೊಂದಿಗೆ ನಗರದ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಏರ್ಪಡಿಸಿದ್ದ 19ನೇ ಚಿತ್ರಸಂತೆ ಕಲಾಲೋಕವನ್ನೇ ಸೃಷ್ಟಿಸಿತ್ತು. ಈ ಚಿತ್ರಸಂತೆಯು ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವುದರ ಜೊತೆ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೂ ಅವಕಾಶ ಒದಗಿಸಿತ್ತು. ಚಿತ್ರಸಂತೆಯು ಕಲಾವಿದರ ಮತ್ತು ಕಲಾಸಕ್ತರ ನಡುವೆ ಬಾಂಧವ್ಯ ಬೆಸೆಯುವ ಸೇತುವೆಯಾಯಿತು.ರಂಗುರಂಗಿನ ಕಲಾಕೃತಿಗಳು ಕಲಾರಸಿಕರ ಸಂಭ್ರಮವನ್ನೂ ಇಮ್ಮಡಿಗೊಳಿಸಿದವು. ಸ್ವಾತಂತ್ರ್ಯ ಸಂಭ್ರಮದ 75ನೇ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಸಮರ್ಪಿಸಲಾಗಿತ್ತು.

ಮರಳಿನ ಚಿತ್ರಕಲೆ, ಜಲವರ್ಣ, ಆ್ಯಕ್ರಿಲಿಕ್‌, ಮಧುಬನಿ, ತೈಲವರ್ಣ, ಡಿಜಿಟಲ್‌ ಪೇಂಟಿಂಗ್‌, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಕಾಫಿ ಪೇಂಟಿಂಗ್‌ ಮುಂತಾದ ನಾನಾ ಪ್ರಕಾರದ ಕಲಾಕೃತಿಗಳು ಗಮನಸೆಳೆದವು.

ADVERTISEMENT

ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಬಂದಿದ್ದ ಕಲಾವಿದರ ಸಮ್ಮಿಲನಕ್ಕೆ ಚಿತ್ರಸಂತೆ ವೇದಿಕೆ ಕಲ್ಪಿಸಿತ್ತು. ₹50 ರಿಂದ ₹8 ಲಕ್ಷದವರೆಗಿನ ಕಲಾಕೃತಿಗಳಿದ್ದವು. ಕೆಲವರು ದುಬಾರಿ ಬೆಲೆ ಕೇಳಿ ಅಚ್ಚರಿಪಟ್ಟರೂ, ಕಲಾವಿದರ ಪ್ರತಿಭೆ ಮತ್ತು ಶ್ರಮಕ್ಕೆ ತಲೆದೂಗಿದರು.

ವ್ಯಕ್ತಿ ಭಾವಚಿತ್ರ ಬರೆಯುವ ಕಲಾವಿದರೂ ಸಹ ಇದ್ದರು. ಕಲಾವಿದರ ಕೈಚಳಕದಲ್ಲಿ ತಮ್ಮದೇ ಚಿತ್ರ ಮೂಡುವ ಬಗೆಯನ್ನು ಕಂಡು ಜನ ನಿಬ್ಬೆರಗಾದರು.

ಬೆಳಿಗ್ಗೆಯಿಂದಲೇ ಜನರು ಚಿತ್ರಸಂತೆಯತ್ತ ಹೆಜ್ಜೆ ಹಾಕಿದ್ದರು. ಕಳೆದ ವರ್ಷ ಕೋವಿಡ್‌ ಕಾರಣಕ್ಕೆ ಆನ್‌ಲೈನ್‌ ಮೂಲಕ ಚಿತ್ರಸಂತೆ ನಡೆದಿತ್ತು. ಈ ಬಾರಿ ಚಿತ್ರ ಜಾತ್ರೆ ಗತವೈಭವಕ್ಕೆ ಮರಳಿದ್ದಕ್ಕೆ ಸಂಭ್ರಮಪಟ್ಟ ಕಲಾಸಕ್ತರು ಅಪೂರ್ವ ಕಲಾಕೃತಿಗಳನ್ನು ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.