
ಬೆಂಗಳೂರು: ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಪ್ರಕಾರ ಕರ್ನಾಟಕದಲ್ಲಿ ಶಿಕ್ಷೆ ಪ್ರಮಾಣ ಶೇ 52ರಷ್ಟು ಮಾತ್ರವೇ ಇದ್ದು, ದೇಶದಲ್ಲಿ 22ನೇ ಸ್ಥಾನದಲ್ಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ವತಿಯಿಂದ ನಗರದ ಕೆಇಬಿ ಸಭಾಂಗಣದಲ್ಲಿ ಶನಿವಾರ ಅಯೋಜಿಸಲಾಗಿದ್ದ ಪ್ರಾಸಿಕ್ಯೂಟರ್‌ಗಳ 17ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧ ಕೃತ್ಯಗಳಲ್ಲಿನ ಶಿಕ್ಷೆ ಪ್ರಮಾಣದಲ್ಲಿ ಕೇರಳ ಶೇ 87, ಮಿಜೋರಾಂ ಶೇ 98, ದೆಹಲಿ ಶೇ 89, ಉತ್ತರ ಪ್ರದೇಶ ಶೇ 27, ಗುಜರಾತ್ ಶೇ 57, ತೆಲಂಗಾಣಗಳಲ್ಲಿ ಶೇ 57ರಷ್ಟಿದೆ. ನಾವು ಕೇರಳ ರಾಜ್ಯದ ಪ್ರಮಾಣವನ್ನು ತಲುಪಲು ಕ್ರಮವಹಿಸಬೇಕಿದೆ ಎಂದರು.
‘ಈ ದಿನಗಳಲ್ಲಿ ಆರ್ಥಿಕ, ಸೈಬರ್ ಮತ್ತು ತಾಂತ್ರಿಕ ಅಪರಾಧಗಳು ಮುನ್ನಲೆಗೆ ಬರುತ್ತಿದ್ದು ಇಂತಹ ಪ್ರಕರಣಗಳಲ್ಲಿ ವಾದ ಮಂಡಿಸುವುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಟರ್‌ಗಳಿಗೆ ಹೆಚ್ಚಿನ ತರಬೇತಿಯ ಅತ್ಯಗತ್ಯವಿದೆ. ಈ ನಿಟ್ಟಿನಲ್ಲಿ ಅಭಿಯೋಜಕರ ತರಬೇತಿ ಅಕಾಡೆಮಿ ಸ್ಥಾಪಿಸಿ, ಅನುದಾನ ನೀಡುವ ಬಗ್ಗೆ ಪರಿಶೀಲಿಸುವೆ’ ಎಂದು ಭರವಸೆ ನೀಡಿದರು.
‘ಪೊಲೀಸ್ ಠಾಣೆಗಳಲ್ಲಿ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳ ಬದಲಾಗಿ ರೈಟರ್‌ಗಳು ಬರೆಯುತ್ತಾರೆ. ಠಾಣೆಗಳಲ್ಲಿ ಕುಳಿತು ಮಹಜರ್ ವರದಿ ಸಿದ್ಧಪಡಿಸುತ್ತಾರೆ. ಪರಿಣಾಮ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ, ಸರ್ಕಾರಿ ವಕೀಲರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ತನಿಖಾಧಿಕಾರಿಗಳೊಂದಿಗೆ ಚರ್ಚಿಸಬೇಕು’ ಎಂದರು.
ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ, ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕಿ ಅಂಜಲಿ ದೇವಿ, ರಾಜ್ಯ ಪ್ರಾಸಿಕ್ಯೂಟರ್‌ಗಳ ಸಂಘದ ಅಧ್ಯಕ್ಷ ಕೆ.ವಿ. ಅಶ್ವತ್ಥ ನಾರಾಯಣ ಮತ್ತು ಕಾರ್ಯದರ್ಶಿ ಸವಿತಾ ಉಪಸ್ಥಿತರಿದ್ದರು.
400 ಹುದ್ದೆ ಶೀಘ್ರ ಭರ್ತಿ: ಗೃಹ ಸಚಿವ ‘ಗೃಹ ಇಲಾಖೆ ಅಧೀನದಲ್ಲಿ 900 ಸರ್ಕಾರಿ ಪ್ರಾಸಿಕ್ಯೂಟರ್‌ಗಳಿದ್ದು ಸದ್ಯ 400 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.