ADVERTISEMENT

ಬೆಂಗಳೂರು: ಮತದಾರರ ಓಲೈಕೆಗೆ ಅಬ್ಬರದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 7 ಮೇ 2023, 21:52 IST
Last Updated 7 ಮೇ 2023, 21:52 IST
ಮಹದೇವಪುರದ ದೊಡ್ಡನೆಕ್ಕುಂದಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ ನಡೆಸಿದರು
ಮಹದೇವಪುರದ ದೊಡ್ಡನೆಕ್ಕುಂದಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ ನಡೆಸಿದರು   

ಬೆಂಗಳೂರು: ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆಬೀಳಲಿದ್ದು, ರಾಜಧಾನಿಯ ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದರು. ಮತದಾರರ ಓಲೈಕೆಗೆ ಅಂತಿಮ ಹಂತದ ಕಸರತ್ತು ನಡೆಸಿದರು.

ತೆರೆದ ವಾಹನಗಳಲ್ಲಿ ಅಭ್ಯರ್ಥಿಗಳು ತಮ್ಮ ಪಕ್ಷದ ನಾಯಕರೊಂದಿಗೆ ರೋಡ್‌ ಶೋ ನಡೆಸಿ, ಮತಯಾಚಿಸಿದರು. ಅಭ್ಯರ್ಥಿಗಳಿಗೆ ಬೆಂಬಲಿಗರು ಸಾಥ್‌ ನೀಡಿದರು. ಬೆಳಿಗ್ಗೆ ಹಾಗೂ ಮಧ್ಯಾಹ್ನ ಜಿಟಿಜಿಟಿ ಮಳೆಯು ಪ್ರಚಾರಕ್ಕೆ ಅಡ್ಡಿ ಪಡಿಸಿತು. ಮಳೆ ನಿಂತ ಬಳಿಕ ಮತ್ತೆ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.

ಹೇರೋಹಳ್ಳಿ ವಾರ್ಡ್‌ನ ಗೊಲ್ಲರಹಟ್ಟಿ, ಬಾಲಾಜಿ ಲೇಔಟ್, ಬ್ಯಾಡರಹಳ್ಳಿ, ಬಿಳಿಕಲ್ಲು, ಅಂಜನಾನಗರ,
ಮುದ್ದಿನಪಾಳ್ಯದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪ್ರಚಾರ ನಡೆಸಿದರು.

ADVERTISEMENT

ಕೆ.ಆರ್.ಪುರ ವರದಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೊಡ್ಡನೆಕ್ಕುಂದಿ ಎಂಬಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ನಾಗೇಶ್ ಪರ ರೋಡ್ ಶೋ ನಡೆಸಿದರು.

ಪ್ರಿಯಾಂಕಾ ಅವರನ್ನು ನೋಡಲು ಸಾವಿರಾರು ಜನರು ರಸ್ತೆಬದಿಯಲ್ಲಿ ನೆರೆದಿದ್ದರು. ಅಭಿಮಾನಿಗಳು ರಸ್ತೆಯುದ್ದಕ್ಕೂ ಹೂವಿನ ಮಳೆಗರೆದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಗುಂಜೂರು ರಾಮಕೃಷ್ಣಪ್ಪ, ಬಾಬುಗೌಡ, ಸಾಥ್ ನೀಡಿದರು.

ಯಲಹಂಕ ವರದಿ: ‘ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸಿದ್ದು, ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜರಾಜೇಶ್ವರಿನಗರ ವರದಿ: ಕ್ಷೇತ್ರದ ಜನರು ನನಗೆ ದೇವರು. ಮತದಾರರೇ ಸ್ಟಾರ್ ಪ್ರಚಾರಕರು. ನಿಮ್ಮ ಶಕ್ತಿಯ ಮುಂದೆ ಎಂತಹ ದುಷ್ಟಶಕ್ತಿ. ಭ್ರಷ್ಟಾಚಾರಿಗಳು ಉಳಿಯುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ
ಎಚ್.ಕುಸುಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.