ADVERTISEMENT

ರಾಜರಾಜೇಶ್ವರಿನಗರ: ಮಾಜಿ ಕಾರ್ಪೊರೇಟರ್ ಸೇರಿ 11 ಮಂದಿ ವಿರುದ್ಧ ಎಫ್‌ಐಆರ್

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಮೇ 2023, 22:11 IST
Last Updated 7 ಮೇ 2023, 22:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಮಾಜಿ ಕಾರ್ಪೊರೇಟರ್ ಬಿಜೆಪಿಯ ಜಿ.ಕೆ.ವೆಂಕಟೇಶ್ ಸೇರಿ 11 ಮಂದಿ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಯಶವಂತಪುರ ವಾರ್ಡ್‌ನ 7ನೇ ಅಡ್ಡರಸ್ತೆಯಲ್ಲಿ ಶನಿವಾರ ಸಂಜೆ ನಡೆದ ಗಲಾಟೆ ಸಂಬಂಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಚಂದ್ರಪ್ಪ ಜಿಗಳಿ ದೂರು ನೀಡಿದ್ದಾರೆ. ಜಿ.ಕೆ.ವೆಂಕಟೇಶ್, ನಿರ್ಮಲಾ, ಸಲ್ಮಾನ್, ಆಟೊ ಸತೀಶ್, ಮಂಜು, ಅಯೂಬ್, ರಘು, ಅನ್ನಮ್ಮ ಮಂಜು, ಅನಿತಾ, ರೇಖಾ, ಗುಲಾಬ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮತಯಾಚನೆ ವಿಚಾರವಾಗಿ ಬಿಜೆಪಿ– ಕಾಂಗ್ರೆಸ್ ನಡುವೆ ಜಟಾಪಟಿ ನಡೆದಿದೆ. ಸ್ಥಳದಲ್ಲಿ ಸೇರಿದ್ದ ಜನರನ್ನು ಲಾಠಿ ಪ್ರಹಾರ ನಡೆಸಿ ಚದುರಿಸಲಾಗಿದೆ. ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿವೆ.

ADVERTISEMENT

ದೂರಿನ ವಿವರ: ‘ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್‌. ಕುಸುಮಾ ಪರ ಪ್ರಚಾರ ಮಾಡಲು ನಾನು ಹಾಗೂ ಇತರೆ ಕಾರ್ಯಕರ್ತರು ಯಶವಂತಪುರ ವಾರ್ಡ್‌ನ 7ನೇ ಅಡ್ಡರಸ್ತೆಗೆ ಹೋಗಿದ್ದೆವು. ಮನೆ ಮನೆಗೆ ಹೋಗಿ ಕರಪತ್ರ  ನೀಡಿ ಮತಯಾಚನೆ ಮಾಡುತ್ತಿದ್ದೆವು. ಸ್ಥಳಕ್ಕೆ ಬಂದಿದ್ದ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಹಾಗೂ ಇತರರು ಪ್ರಚಾರಕ್ಕೆ ಅಡ್ಡಿಪಡಿಸಿದ್ದರು’ ಎಂದು ಚಂದ್ರಪ್ಪ ದೂರಿನಲ್ಲಿ ತಿಳಿಸಿದ್ದಾರೆ.

‘ಹೊರಗಿನಿಂದ ಬಂದು ನಮ್ಮ ಪ್ರದೇಶದಲ್ಲಿ ಏಕೆ ಪ್ರಚಾರ ಮಾಡುತ್ತಿದ್ದಿರಾ. ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ’ ಎಂದಿದ್ದ ವೆಂಕಟೇಶ್ ಹಾಗೂ ಇತರರು ನಮ್ಮ ಮೇಲೆ ಹಲ್ಲೆ ಮಾಡಿದರು. ಮಹಿಳಾ ಕಾರ್ಯಕರ್ತೆಯರನ್ನು ರಸ್ತೆಯಲ್ಲಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಚುನಾವಣಾಧಿಕಾರಿ ತಂಡದ ಎದುರೇ ಆರೋಪಿಗಳು ಕೃತ್ಯ ಎಸಗಿದ್ದಾರೆ. ಪೊಲೀಸರು ಮೌನವಾಗಿದ್ದರು. ಹಲ್ಲೆಯಿಂದಾಗಿ ನಾನು ಹಾಗೂ ಇತರೆ ಕಾರ್ಯಕರ್ತರು ಗಾಯಗೊಂಡಿದ್ದಾರೆ ’ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಆರೋಪಿಗಳು: ‘ಪ್ರಕರಣದ ಮೂವರು ಆರೋಪಿಗಳು, ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಮೇಲೂ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವುದಾಗಿ ದೂರುತ್ತಿದ್ದಾರೆ. ಪ್ರಕರಣದ ಕೆಲ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.