ಔಷಧ
ಬೆಂಗಳೂರು: ಆರೋಗ್ಯ ಸಂಸ್ಥೆಗಳಿಗೆ 2025–26ನೇ ಸಾಲಿಗೆ ಒಟ್ಟು ₹880.68 ಕೋಟಿ ವೆಚ್ಚದಲ್ಲಿ 890 ಬಗೆಯ ಔಷಧಗಳನ್ನು ಖರೀದಿಸಿ, ಬೇಡಿಕೆಗೆ ಅನುಸಾರ ಪೂರೈಸುವಂತೆ ಆರೋಗ್ಯ ಇಲಾಖೆಯು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಸೂಚಿಸಿದೆ.
ಇಲಾಖೆ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳು ಮತ್ತು ಕಾರಾಗೃಹ ಆಸ್ಪತ್ರೆಗಳು ವಾರ್ಷಿಕ ಔಷಧ ಬೇಡಿಕೆಗಳನ್ನು ಔಷಧ ತಂತ್ರಾಂಶದ ಮೂಲಕ ಸಲ್ಲಿಸಿದ್ದಾರೆ. ಅಗತ್ಯವಿರುವ ₹ 880.68 ಕೋಟಿ ಬಜೆಟ್‌ನಲ್ಲಿ, ಒಟ್ಟು ₹ 12.06 ಕೋಟಿಗಳಲ್ಲಿ ₹10 ಲಕ್ಷಕ್ಕಿಂತ ಕಡಿಮೆ ಖರೀದಿ ಬೆಲೆ ಇರುವ 356 ಔಷಧಗಳನ್ನು ಜಿಲ್ಲೆಗಳಿಂದ ಅಥವಾ ಸ್ಥಳೀಯ ಆರೋಗ್ಯ ಸಂಸ್ಥೆಗಳಿಂದ ಖರೀದಿ ಮಾಡಲಾಗುವುದು. ಉಳಿದ ಔಷಧಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಕೇಂದ್ರೀಕೃತವಾಗಿ ಖರೀದಿಸಲಾಗುವುದು ಎಂದು ತಿಳಿಸಲಾಗಿದೆ.
ಆರೋಗ್ಯ ಸಂಸ್ಥೆಗಳಿಗೆ ಅಗತ್ಯವಿರುವ ಐವಿ ರಿಂಗರ್ ಲ್ಯಾಕ್ಟೇಟ್ ಹಾಗೂ ಐವಿ ಡಿಎನ್‌ಎಸ್ ಔಷಧ ಖರೀದಿಸಲು ₹4.99 ಕೋಟಿ ಅನುದಾನ ಬಳಕೆಗೆ ಅನುಮೋದನೆ ನೀಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಬ್ಯಾಚ್‌ಗಳ ಐವಿ ರಿಂಗರ್ ಲ್ಯಾಕ್ಟೇಟ್ ಔಷಧ ಕಾರಣವೆಂದು, ಇಲಾಖೆಯು ಪಶ್ಚಿಮ ಬಂಗಾಳದ ‘ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್’ ಕಂಪನಿ ಜತೆಗಿನ ಗುತ್ತಿಗೆ ರದ್ದುಪಡಿಸಿತ್ತು. ಈಗ ಬಾಕಿ ಉಳಿದಿರುವ ಅನುದಾನದಲ್ಲಿ ಔಷಧ ಖರೀದಿಸಲು ಅನುಮೋದನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.