ADVERTISEMENT

ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ: ದಿನೇಶ್‌ ಗುಂಡೂರಾವ್‌

ಹೊಸದಾಗಿ ನೇಮಕವಾಗುವವರಿಗೆ ಅನ್ವಯ

​ಪ್ರಜಾವಾಣಿ ವಾರ್ತೆ
Published 14 ಮೇ 2025, 16:21 IST
Last Updated 14 ಮೇ 2025, 16:21 IST
<div class="paragraphs"><p>ದಿನೇಶ್‌ ಗುಂಡೂರಾವ್‌</p></div>

ದಿನೇಶ್‌ ಗುಂಡೂರಾವ್‌

   

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಯೋಜನೆಯಡಿ ಕಾರ್ಯನಿರ್ವಹಿಸುವ ವೈದ್ಯರ ಹಾಗೂ ಶುಶ್ರೂಷಕರ ವೇತನವನ್ನು ಆರೋಗ್ಯ ಇಲಾಖೆಯು ಹೆಚ್ಚಳ ಮಾಡಿದ್ದು, ಇದು ಹೊಸದಾಗಿ ನೇಮಕವಾಗುವವರಿಗೆ ಮಾತ್ರ ಅನ್ವಯವಾಗಲಿದೆ. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಎನ್‌ಎಚ್‌ಎಂ ಯೋಜನೆಯಡಿ ಮಂಜೂರಾಗಿದ್ದ 1,398 ಎಂಬಿಬಿಎಸ್ ವೈದ್ಯರ ಹುದ್ದೆಗಳಲ್ಲಿ 579 ಹುದ್ದೆಗಳು, 899 ತಜ್ಞ ವೈದ್ಯರ ಹುದ್ದೆಗಳಲ್ಲಿ 305 ಹುದ್ದೆಗಳು ಹಾಗೂ 9,041 ಶುಶ್ರೂಷಕರ ಹುದ್ದೆಗಳಲ್ಲಿ 936 ಹುದ್ದೆಗಳು ಖಾಲಿ ಉಳಿದಿವೆ. ವೇತನ ಕಡಿಮೆ ಎಂಬ ಕಾರಣಕ್ಕೆ ಅರ್ಹ ಅಭ್ಯರ್ಥಿಗಳು ಈ  ಹುದ್ದೆಗಳಿಗೆ ಬರುತ್ತಿಲ್ಲ. ಆದ್ದರಿಂದ ವೇತನ ಪರಿಷ್ಕರಿಸಿ, ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಎಂಬಿಬಿಎಸ್ ವೈದ್ಯರ ವೇತನ ಈಗ ₹46,895ರಿಂದ ₹50 ಸಾವಿರವಿದೆ. ಅದನ್ನು ₹60 ಸಾವಿರಕ್ಕೆ ಹೆಚ್ಚಿಸಲಾಗಿದೆ. ತಜ್ಞ ವೈದ್ಯರ ವೇತನವು ₹1.10 ಲಕ್ಷದಿಂದ ₹1.30 ಲಕ್ಷವಿದ್ದು, ಅದನ್ನು ₹1.40 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಶುಶ್ರೂಷಕರ ವೇತನವು ₹14,186ರಿಂದ ₹18,774 ಇದ್ದು, ಪರಿಷ್ಕೃತ ವೇತನವನ್ನು ₹22 ಸಾವಿರಕ್ಕೆ ಏರಿಸಲಾಗಿದೆ’ ಎಂದರು. 

‘ತಜ್ಞ ವೈದ್ಯರ ಹುದ್ದೆಗೆ ಅನುಭವ ಹೊಂದಿದ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ಪ್ರತಿ ವರ್ಷ ಅನುಭವಕ್ಕೆ ಅನುಗುಣವಾಗಿ ವೇತನದಲ್ಲಿ ಶೇ 2.5ರಷ್ಟು ಹೆಚ್ಚಳ ಮಾಡಲಾಗುವುದು. ಪರಿಷ್ಕೃತ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಅನ್ವಯಿಸಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮುಂದುವರಿಯುತ್ತಾರೆ. ಅವರು ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅನುಭವದ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತದೆ’ ಎಂದು ಹೇಳಿದರು. 

‘ಶೀಘ್ರ ವೇತನ ಪಾವತಿ’

‘ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾದ್ದರಿಂದ ಎನ್‌ಎಚ್‌ಎಂ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಎರಡು ತಿಂಗಳ ವೇತನ ಪಾವತಿಯಾಗಿಲ್ಲ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗಿದೆ. ಎರಡು ಮೂರು ದಿನಗಳಲ್ಲಿ ಹಣ ಬಿಡುಗಡೆಯಾಗಲಿದ್ದು ಶೀಘ್ರವೇ ವೇತನ ಪಾವತಿಸಲಾಗುವುದು’ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ‘ಆರ್ಥಿಕ ವರ್ಷದ ಆರಂಭದಲ್ಲೇ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ಆದರೆ ಈ ಹಿಂದೆ ನಮ್ಮಲ್ಲಿ ಲಭ್ಯವಿರುವ ಅನುದಾನದಡಿಯೇ ವೇತನ ಪಾವತಿಸುತ್ತಿದ್ದೆವು. ಬಳಿಕ ಕೇಂದ್ರದಿಂದ ಹಣ ಬರುತ್ತಿತ್ತು. ಆದರೆ ಈ ವರ್ಷ ಎನ್‌ಎಚ್‌ಎಂ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿ ಶೇ 95ರಷ್ಟು ಅನುದಾನ ಬಳಕೆ ಮಾಡಲಾಗಿದೆ. ಆದ್ದರಿಂದ ವೇತನ ವಿಳಂಬವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.