ADVERTISEMENT

ಗಾಣಕಲ್ಲು ಗೋಮಾಳ: ಒತ್ತುವರಿ ತೆರವು ಕ್ರಮಕ್ಕೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 19:27 IST
Last Updated 9 ಸೆಪ್ಟೆಂಬರ್ 2019, 19:27 IST
   

ಬೆಂಗಳೂರು: ‘ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಗಾಣಕಲ್ಲು ಗ್ರಾಮ ವ್ಯಾಪ್ತಿಯಲ್ಲಿ ಆಗಿರುವ ಗೋಮಾಳದ ಒತ್ತುವರಿ ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

‘ಅಂತರರಾಷ್ಟ್ರೀಯ ಮಾನವ ಹಕ್ಕು ಪರಿಷತ್’ ಕಾರ್ಯದರ್ಶಿ ಎನ್. ಮಂಜುನಾಥ್ ಹಾಗೂ ಹೆಮ್ಮಿಗೆಪುರ ವಾರ್ಡ್‌ನ ಕರವೇ ಅಧ್ಯಕ್ಷ ಆರ್. ಕೃಷ್ಣಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಪುಟ್ಟಶಿವನೇಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಎನ್‌.ಪಿ.ಅಮೃತೇಶ್‌, ‘ಗಾಣಕಲ್ಲು ಗ್ರಾಮದಲ್ಲಿ 40 ಎಕರೆಗೂ ಹೆಚ್ಚು ಪ್ರದೇಶವನ್ನು ಗೋಮಾಳವಾಗಿಯೇ ಉಳಿಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ನ್ಯಾಯಪೀಠವು, ‘ಒತ್ತುವರಿಯಾಗಿರುವ ಗೋಮಾಳವನ್ನು ರಕ್ಷಿಸಬೇಕು’ ಎಂದು ಆದೇಶಿಸಿ, ಪ್ರಕರಣದ ಪ್ರತಿವಾದಿಗಳಾದ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಅವರಿಗೆ ನೋಟಿಸ್‌ ಜಾರಿಗೆ ಆದೇಶಿಸಿತು. ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಲಾಗಿದೆ.

‘ಗ್ರಾಮದ ಸರ್ವೇ ನಂಬರ್ 14ರಲ್ಲಿ ಒಟ್ಟು 45.30 ಎಕರೆ ಗೋಮಾಳವಿದೆ. 4.21 ಎಕರೆ ಜಾಗವನ್ನು ಬಡಾವಣೆ ನಿರ್ಮಾಣಕ್ಕೆ ಬಿಡಿಎಗೆ, ಕರ್ನಾಟಕ ಚಿತ್ರಕಲಾ ಪರಿಷತ್‍ಗೆ 14 ಎಕರೆ ಹಾಗೂ ಓಂಕಾರ ಆಶ್ರಮಕ್ಕೆ 8 ಎಕರೆ ಮಂಜೂರು ಮಾಡಲಾಗಿದೆ. 11 ಎಕರೆಯನ್ನು ಗುಡಿಸಲು ವಾಸಿಗಳಾದ 521 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.