ADVERTISEMENT

ಮನೆ ಮುಂದೆ ಶವಸಂಸ್ಕಾರ ಪ್ರಕರಣ: ಯಥಾಸ್ಥಿತಿ ಮುಂದುವರಿಕೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 19:19 IST
Last Updated 25 ಫೆಬ್ರುವರಿ 2019, 19:19 IST

ಬೆಂಗಳೂರು: ‘ಸಾರ್ವಜನಿಕ ರಸ್ತೆಯಲ್ಲಿ ಶವ ಸಂಸ್ಕಾರ ಮಾಡಲಾಗಿದೆ’ ಎಂದು ಆರೋಪಿಸಿ ಸಲ್ಲಿಸಲಾಗಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ, ‘ಉಭಯ ಪಕ್ಷಗಾರರು ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂಬ ಆದೇಶವನ್ನು ಹೈಕೋರ್ಟ್‌ ಎರಡು ವಾರಗಳ ಕಾಲ ವಿಸ್ತರಿಸಿದೆ.

ಈ ಕುರಿತಂತೆ ಚನ್ನಕೇಶವ ನಗರದ ಪರಪ್ಪನ ಅಗ್ರಹಾರ ರಸ್ತೆಯ ಮೊದಲ ತಿರುವಿನ ನಿವಾಸಿ ಜಿ.ನಾಗರಾಜ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರತಿವಾದಿಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಪಾಪ ರೆಡ್ಡಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಎಚ್‌.ಸುನಿಲ್‌ ಕುಮಾರ್‌, ಪ್ರತಿವಾದಿಗಳ ಶವ ಸಂಸ್ಕಾರ ಮಾಡಿರುವ ಸ್ಥಳದಲ್ಲಿ ಗೋರಿ ನಿರ್ಮಾಣದ ಸಿದ್ಧತೆ ನಡೆಸಿದ್ದಾರೆ ಎಂದು ದೂರಿದರು.

ಇದಕ್ಕೆ ನ್ಯಾಯಪೀಠ, ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಆದೇಶಿಸಿತು.

ಪ್ರಕರಣವೇನು?: ‘ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಂಗಸಂದ್ರ ಗ್ರಾಮದ ಹೊಸೂರು ಮುಖ್ಯ ರಸ್ತೆಯ ನಿವಾಸಿ ಪಾಪ ರೆಡ್ಡಿ ಅವರು, ತಮ್ಮ ತಂದೆಯ ಶವವನ್ನು ನನ್ನ ಮನೆಯ ಪೂರ್ವ ಭಾಗಕ್ಕಿರುವ ಸಾರ್ವಜನಿಕ ರಸ್ತೆಯಲ್ಲಿ ಸಂಸ್ಕಾರ ಮಾಡಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

ಪ್ರಕರಣದಲ್ಲಿ, ಬಿಬಿಎಂಪಿ ಆಯುಕ್ತರು, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ತಹಶೀಲ್ದಾರ್, ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮತ್ತು ಪಾಪ ರೆಡ್ಡಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.