ADVERTISEMENT

ನಾಯಿ ದಾಳಿಯಿಂದ ಮೃತನಾದ ಬಾಲಕನ ಪೋಷಕರಿಗೆ ₹10 ಲಕ್ಷ ಪರಿಹಾರ!

ಬೀದಿನಾಯಿ ಹಾವಳಿ: ನಿಯಂತ್ರಣಕ್ಕೆ ಹೈಕೋರ್ಟ್‌ ಮಹತ್ವದ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 19:45 IST
Last Updated 29 ಜೂನ್ 2022, 19:45 IST
   

ಬೆಂಗಳೂರು: ‘ಬೀದಿ ನಾಯಿಗಳ ದಾಳಿಯಿಂದ ನಾಗರಿಕರು ಗಾಯ ಗೊಂಡರೆ ಅಥವಾ ಸಾವಿಗೀಡಾದರೆ ಸ್ಥಳೀಯ ಪೌರಾಡಳಿತ ಸಂಸ್ಥೆಗಳೇ ಹೊಣೆಯಾಗುತ್ತವೆ’ ಎಂದು ಆದೇಶಿ ಸಿರುವ ಹೈಕೋರ್ಟ್, ಬೀದಿ ನಾಯಿಗಳ ದಾಳಿಯಿಂದ ಬಾಲಕನೊಬ್ಬ ಸಾವನ್ನ ಪ್ಪಿದ ಪ್ರಕರಣದಲ್ಲಿ ₹ 10 ಲಕ್ಷ ಪರಿಹಾರ ನೀಡುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಆದೇಶಿಸಿದೆ.

ಬೀದಿ ನಾಯಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಎರಡು ವರ್ಷದ ಗಂಡು ಮಗುವಿನ ತಂದೆ ಬೆಳಗಾವಿಯ ಬಾಳೆ ಕುಂದ್ರಿ ನಿವಾಸಿ ಯೂಸುಬ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಈ ಕುರಿತಂತೆ ಧಾರವಾಡ ಪೀಠದಲ್ಲಿ ಆದೇಶ ಮಾಡಿದ್ದಾರೆ.

‘ಬೀದಿ ನಾಯಿಗಳ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸುವುದು ಪೌರಾಡಳಿತ ಸಂಸ್ಥೆಗಳ ಆದ್ಯ ಕರ್ತವ್ಯ ಹಾಗೂ ಹೊಣೆಯಾಗಿದೆ.ಮನುಷ್ಯರಂತೆ ನಾಯಿಗಳಿಗೂ ಬದುಕುವ ಹಕ್ಕಿದೆ. ಹಾಗಾಗಿ, ಜನರು ನಾಯಿಗಳ ಮೇಲೆ ಕಲ್ಲು ಎಸೆದು ದಾಳಿ ನಡೆಸುವುದನ್ನು ನಿಲ್ಲಿಸಬೇಕು. ಮಕ್ಕಳು ಬೀದಿ ನಾಯಿಗಳ ಬಳಿ ಹೋಗದಂತೆ, ಆಟವಾಡದಂತೆ ಮತ್ತು ತಿನಿಸು ಕೊಡದಂತೆ ಹಿರಿಯರು ಗಮನ ಹರಿಸಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ನಿರ್ದೇಶನಗಳು:

l→ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಪ್ರಾಣಿ ಜನನ ನಿಯಂತ್ರಣ ನಿಯಮಗಳಡಿ ಬೀದಿ ನಾಯಿಗಳಿಗೆ ಸಂತಾನ ಹರಣ ಮತ್ತು ವ್ಯಾಕ್ಸಿನೇಷನ್ ಅನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಮೇಲ್ವಿಚಾರಣಾ ಸಮಿತಿಗಳು ಖಾತರಿಪಡಿಸಬೇಕು. ವಿಶೇಷವಾಗಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಕೆಲಸ ನಡೆಯಬೇಕು. ಇದಕ್ಕಾಗಿ ಎನ್‌ಜಿಒ ಮತ್ತು ಇತರೆ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿ ಕಾರಿ ಕಚೇರಿಗೆ ವರದಿ ಸಲ್ಲಿಸಬೇಕು.

l→ಪ್ರಾಣಿಗಳ ಜನನ ನಿಯಂತ್ರಣ ಕಾಯ್ದೆಯ ನಿಯಮ 9ರ ಪ್ರಕಾರ ವಾಸಿಯಾಗದ ಕಾಯಿಲೆ ಅಥವಾ ಮಾರಣಾಂತಿಕ ಗಾಯಗಳಿಂದ ನರಳುತ್ತಿರುವ ಬೀದಿ ನಾಯಿಗಳಿಗೆ ತಜ್ಞ ಪಶು ವೈದ್ಯರಿಂದ ದಯಾ ಮರಣ ಕಲ್ಪಿಸಬೇಕು.

l→ಆಕ್ರಮಣಕಾರಿ ಮತ್ತು ರೇಬಿಸ್ ರೋಗದಿಂದ ನರಳುತ್ತಿರುವ ನಾಯಿಗಳ ಕುರಿತು ದೂರುಗಳು ಬಂದರೆ ಸ್ಥಳೀಯ ಪೌರಾಡಳಿತ ಸಂಸ್ಥೆಯ ಶ್ವಾನ ದಳವು ಪರಿಶೀಲನೆ ನಡೆಸಬೇಕು. ನಾಯಿಗೆ ರೇಬಿಸ್ ಇದ್ದರೆ ಸಹಜ ಸಾವು ಬರುವವರೆಗೂ ಅದನ್ನು ಐಸೋಲೇಷನ್‌ನಲ್ಲಿ ಇರಿಸಬೇಕು.

l→ಬೀದಿ ನಾಯಿಗಳ ಕುರಿತು ನಾಗರಿಕರು ದೂರು ಸಲ್ಲಿಸಲು ದೂರು ಘಟಕ ಸ್ಥಾಪಿಸಬೇಕು.

l→ಜನವಸತಿ ಪ್ರದೇಶದಲ್ಲಿ ನಾಯಿಗಳ ಹಾವಳಿ ಹೆಚ್ಚಾಗದಂತೆ ಸಮರ್ಪಕವಾಗಿ ಕಸ ಸಂಗ್ರಹಣೆ ಮಾಡಿ ವಿಲೇವಾರಿ ಮಾಡಬೇಕು.

l→ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳು ನಾಯಿ ದಾಳಿಗೆ ತುತ್ತಾದವರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚನೆ ಮಾಡಬೇಕು.

l→‘ಈ ಆದೇಶದ ಅನುಪಾಲನಾ ವರದಿಯನ್ನು ನಾಲ್ಕು ತಿಂಗಳಲ್ಲಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.