ಬೆಂಗಳೂರು: ರಾಯಲ್ ಆರ್ಕಿಡ್ ಹೋಟೆಲ್ಸ್ ಲಿಮಿಟೆಡ್‌ಗೆ 1.07 ಲಕ್ಷ ಚದರಡಿ ಭೂಮಿಯ ಗುತ್ತಿಗೆ ನೀಡುವಲ್ಲಿ ರಾಜ್ಯ ಸರ್ಕಾರ ಕಾನೂನನ್ನು ಉಲ್ಲಂಘಿಸಿರುವುದರಿಂದ ಸರ್ಕಾರಕ್ಕೆ ₹600 ಕೋಟಿ ನಷ್ಟ ಉಂಟಾಗಿದೆ.
ಸ್ಟಾರ್ ಹೋಟೆಲ್‌ಗಳ ಕಾರ್ಯಾಚರಣೆ ನಡೆಸುವ ರಾಯಲ್ ಆರ್ಕಿಡ್ ಹೋಟೆಲ್‌ಗೆ ಟೆಂಡರ್ ಪ್ರಕ್ರಿಯೆ ನಡೆಸದೆ, ಅಧಿಕಾರಿಗಳ ಸಲಹೆಯನ್ನೂ ಪರಿಗಣಿಸದೆ ಅತಿ ಕಡಿಮೆ ಬೆಲೆಗೆ ಗುತ್ತಿಗೆ ನೀಡಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ದಾಖಲೆಗಳ ಪ್ರಕಾರ, ದೊಮ್ಮಲೂರಿನಲ್ಲಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಪಕ್ಕದಲ್ಲಿರುವ 2 ಎಕರೆ 19 ಗುಂಟೆ (1,07,593 ಚದರಡಿ) ಭೂಮಿಯ ಗುತ್ತಿಗೆಯನ್ನು ಅಧಿಕಾರಿಗಳ ಆಕ್ಷೇಪಣೆಯ ನಡುವೆಯೂ ಮರು ನವೀಕರಿಸಲಾಗಿದೆ.
ಪ್ರವಾಸೋದ್ಯಮದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೋಟೆಲ್ ರಾಯಲ್ ಆರ್ಕಿಡ್‌ಗೆ ಹಲವು ಕಡೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವತಿಯಿಂದ ಭೂಮಿ ನೀಡಲಾಗಿದೆ. 1992ರಲ್ಲಿ ರಾಯಲ್ ಆರ್ಕಿಡ್ಸ್‌ಗೆ 4 ಎಕರೆ 32 ಗುಂಟೆಯನ್ನು ಪ್ರತಿ ಎಕರೆಗೆ ₹1.11 ಲಕ್ಷ ವಾರ್ಷಿಕ ಬಾಡಿಗೆ ನಿಗದಿಪಡಿಸಿ 30 ವರ್ಷಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಈ ಗುತ್ತಿಗೆ ಅವಧಿ 2022ರ ಜನವರಿ 1ರಂದು ಮುಗಿದಿತ್ತು. ಕಂಪನಿ ಗುತ್ತಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿತ್ತು. ಷರತ್ತಿನಂತೆ, ಗುತ್ತಿಗೆ ನವೀಕರಣವಾಗಬೇಕಿದ್ದರೆ ‘ಪರಸ್ಪರ ಒಪ್ಪಿಗೆ’ಯಾಗಬೇಕಿತ್ತು.
ಈ ಗುತ್ತಿಗೆ ನವೀಕರಣದ ಸಂದರ್ಭದಲ್ಲಿ ಕೆಎಸ್‌ಡಿಟಿಸಿ ಅಧಿಕಾರಿಗಳು ಕಡತವನ್ನು ಪರಿಶೀಲಿಸಿದಾಗ ಆಶ್ಚರ್ಯಗೊಂಡಿದ್ದಾರೆ. ಮೂಲ ಗುತ್ತಿಗೆಯ ನಿಯಮಗಳನ್ನು ಉಲ್ಲಂಘಿಸಿ, 25 ಗುಂಟೆ (27,000 ಚದರಡಿ) ಭೂಮಿಯನ್ನು ₹23 ಲಕ್ಷಕ್ಕೆ ಮತ್ತೊಂದು ಕಂಪನಿ ‘ಗಾಲ್ಫ್ ವ್ಯೂ ಹೋಮ್ಸ್’ಗೆ ಉಪ ಗುತ್ತಿಗೆ ನೀಡಲಾಗಿತ್ತು. ಹೀಗಿದ್ದರೂ, ಕಂಪನಿ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಂಡಿರಲಿಲ್ಲ.
2022ರಲ್ಲಿ ಕೆಎಸ್‌ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದು, ಗುತ್ತಿಗೆ ನವೀಕರಣದ ಮನವಿಯನ್ನು ತಿರಸ್ಕರಿಸಬೇಕು ಎಂದು ತಿಳಿಸಿದ್ದರು. ‘ಗುತ್ತಿಗೆದಾರರು ಯಾವುದೇ ರೀತಿಯಲ್ಲೂ ಭೂಮಿಯನ್ನು ಉಪ ಗುತ್ತಿಗೆ, ಅಡಮಾನ ಅಥವಾ ಇತರೆ ಯಾವುದೇ ರೀತಿಯ ಪ್ರಕ್ರಿಯೆಯನ್ನು ಪೂರ್ವಾನುಮತಿ ಇಲ್ಲದೆ ನಡೆಸುವಂತಿಲ್ಲ’ ಎಂದು 1992ರ ಜುಲೈ 20ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಅವರು ಉಲ್ಲೇಖಿಸಿದ್ದರು.
‘ರಾಯಲ್ ಆರ್ಕಿಡ್ ಹೋಟೆಲ್ ಪೂರ್ವಾನುಮತಿ ಇಲ್ಲದೆ ಸರ್ಕಾರಿ ಭೂಮಿಯನ್ನು ಗಾಲ್ಫ್ ವ್ಯೂ ಹೋಮ್ಸ್‌ಗೆ ಉಪಗುತ್ತಿಗೆ ನೀಡಿರುವುದು ಅಕ್ರಮ. 30 ವರ್ಷಗಳ ಗುತ್ತಿಗೆ ನವೀಕರಣವನ್ನು ತಿರಸ್ಕರಿಸಬೇಕು. ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಬೇಕು’ ಎಂದು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದಿದ್ದರು.
ಹೀಗಿದ್ದರೂ, 2023ರ ಮಾರ್ಚ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸಭೆ ನಡೆಸಿ, ರಾಯಲ್ ಆರ್ಕಿಡ್ ಅಕ್ರಮವಾಗಿ ಉಪ–ಗುತ್ತಿಗೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿ, 2 ಎಕರೆ 19 ಗುಂಟೆ ಜಮೀನಿನ ಗುತ್ತಿಗೆಯನ್ನು ನವೀಕರಿಸಲು ನಿರ್ಧರಿಸಿದರು.
ಕೆಎಸ್‌ಟಿಡಿಸಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಪ್ರತಿಕ್ರಿಯಿಸಲಿಲ್ಲ.
ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಚಂದರ್ ಕೆ. ಬಾಲ್ಜಿ ಅವರು ಇ–ಮೇಲ್‌ಗಳಿಗೆ ಪ್ರತಿಕ್ರಿಯಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.