ADVERTISEMENT

ಮನೆಗಳ ವಿದ್ಯುತ್‌ ಸಂಪರ್ಕಕ್ಕೆ ಅಡ್ಡಿ ಬೇಡ: ಸಿಎಂ ಬಸವರಾಜ ಬೊಮ್ಮಾಯಿ

ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿದ್ದರೂ ಅವಕಾಶ: ಶೀಘ್ರ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 19:20 IST
Last Updated 20 ಜುಲೈ 2022, 19:20 IST
ನಗರದಲ್ಲಿ ಬುಧವಾರ ಕರ್ನಾಟಕ ವಿದ್ಯುತ್ ನಿಗಮದ 53ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ನಿಗಮದ ನೌಕರರ ಮಕ್ಕಳನ್ನು ಗೌರವಿಸಿದರು. ಇಂಧನ ಸಚಿವ ವಿ. ಸುನೀಲ್ ಕುಮಾರ್ ಇದ್ದರು      –ಪ್ರಜಾವಾಣಿ ಚಿತ್ರ
ನಗರದಲ್ಲಿ ಬುಧವಾರ ಕರ್ನಾಟಕ ವಿದ್ಯುತ್ ನಿಗಮದ 53ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ನಿಗಮದ ನೌಕರರ ಮಕ್ಕಳನ್ನು ಗೌರವಿಸಿದರು. ಇಂಧನ ಸಚಿವ ವಿ. ಸುನೀಲ್ ಕುಮಾರ್ ಇದ್ದರು      –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಮೀನಿಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿ ಮನೆಗಳನ್ನು ನಿರ್ಮಿಸಿದ್ದರೂ ವಿದ್ಯುತ್‌ ಸಂಪರ್ಕ ಕಲ್ಪಿಸಲು ಯಾವುದೇ ರೀತಿ ಅಡ್ಡಿ ಮಾಡಬಾರದು. ಅರ್ಜಿ ಸಲ್ಲಿಸುವ ಪ್ರತಿ ಬಡವನ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ಶೀಘ್ರ ಕಾಯ್ದೆ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ 53ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬಾರದು ಎನ್ನುವುದು ಹಳೆಯ ಚಿಂತನೆ. ವಿದ್ಯುತ್ ಅಗತ್ಯ ಸೇವೆಯಾಗಿದೆ. ಹೀಗಾಗಿ, ಕೊಳೆಗೇರಿ ಸೇರಿದಂತೆ ಯಾವುದೇ ಜಾಗದಲ್ಲಿ ನಿರ್ಮಿಸಿದ್ದರೂ ಅರ್ಜಿ ಹಾಕಿದವರೆಲ್ಲರಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು’ ಎಂದು ಸೂಚಿಸಿದರು.

‘ಈ ಬಗ್ಗೆ ಆದೇಶ ಹೊರಡಿಸುವಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೂ (ಕೆಇಆರ್‌ಸಿ) ಸೂಚಿಸಲಾಗುವುದು. ಮಾನವೀಯತೆ ದೃಷ್ಟಿಯಿಂದಲೂ ಇದು ಉತ್ತಮ ಕ್ರಮ. ಜಮೀನಿಗೆ ಸಂಬಂಧಿಸಿದ ಕಾನೂನುಗಳು ಉಲ್ಲಂಘನೆಯಾಗಿದ್ದರೆ ಕಂದಾಯ ಇಲಾಖೆ ಪರಿಶೀಲಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ವಿದ್ಯುತ್‌ ಸಂಗ್ರಹ ಯೋಜನೆ (ಪಿಎಸ್‌ಪಿ)ಯನ್ನು ಶರಾವತಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗುವುದು. ಖಾಸಗಿ
ಸಂಸ್ಥೆಗಳು ಸಹ ಪಿಎಸ್‌ಪಿ ಘಟಕಗಳನ್ನು ಸ್ಥಾಪಿಸಬಹುದು. ಈ ಮೂಲಕ ಉತ್ಪಾದನೆಯಾಗಿರುವ ವಿದ್ಯುತ್‌ ಅನ್ನು ಗರಿಷ್ಠವಾಗಿ ಬಳಸಲಾಗುವುದು’ ಅವರು ಎಂದು ಹೇಳಿದರು.

‘ಪರಿಶಿಷ್ಟರಿಗೆ 75 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್‌ ನೀಡುವ ಯೋಜನೆ ಮುಂದಿನ ತಿಂಗಳು ಜಾರಿಯಾಗಲಿದೆ. ರೈತರ 10 ಎಚ್‌ಪಿ ಪಂಪ್‌ಸೆಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಒಟ್ಟಾರೆ ₹14 ಸಾವಿರ ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. ಎಸ್ಕಾಂಗಳ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರ ನೆರವು ನೀಡುತ್ತಿದೆ. ಕಳೆದ ವರ್ಷ ಐದು ಸಾವಿರ ಕೋಟಿ ರೂಪಾಯಿ ನೀಡಲಾಗಿತ್ತು’ ಎಂದು ಹೇಳಿದರು.

‘ಎಸ್ಕಾಂಗಳು, ಕೆಪಿಟಿಸಿಎಲ್‌, ಕೆಪಿಸಿಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಗುರುಚರಣ್ ಸಮಿತಿ ನೀಡಿರುವ ವರದಿಯನ್ನು ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಮುಂದೆ ಮಂಡಿಸಲಾಗುವುದು’ ಎಂದು ತಿಳಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ಶ್ರೀಕರ್‌ ಅವರು ಮಾತನಾಡಿ, ‘ಕರ್ನಾಟಕ ವಿದ್ಯುತ್‌ ನಿಗಮವು ಕಳೆದ ಹಣಕಾಸು ವರ್ಷದಲ್ಲಿ ₹9 ಸಾವಿರ ಕೋಟಿ ವಹಿವಾಟು ನಡೆಸಿ ಲಾಭದ ಹಾದಿಯಲ್ಲಿ ಸಾಗಿದೆ’ ಎಂದು ಹೇಳಿದರು.

‘ಸೂಪಾ ಅಣೆಕಟ್ಟೆ ನಿರ್ಮಿಸಿದ್ದು ಸಾಹಸದ ಕಾರ್ಯ’

ಸೂಪಾ ಅಣೆಕಟ್ಟು ನಿರ್ಮಾಣ ಕಾರ್ಯವನ್ನು ತಾವು ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿ ಪ್ರತ್ಯಕ್ಷವಾಗಿ ಕಂಡಿದ್ದನ್ನು ವಿವರಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ‘ಈ ಅಣೆಕಟ್ಟಿಗೆ ಅಡಿಪಾಯ ಹಾಕುವುದು ಕಷ್ಟವಾಗಿತ್ತು. ಕೊನೆಗೆ ಮಂಜುಗಡ್ಡೆಗಳನ್ನು ಹಾಕಿ ಅಡಿಪಾಯ ಹಾಕಲಾಯಿತು. ಈ ಅಣೆಕಟ್ಟು ನಿರ್ಮಾಣಕ್ಕೆ ಅಫ್ಗಾನಿಸ್ತಾನದ ಜತೆ ಹಣಕಾಸಿನ ಒಪ್ಪಂದವಾಗಿತ್ತು’ ಎಂದು ನೆನಪಿಸಿಕೊಂಡರು. ‘ಇದು ಭೌಗೋಳಿಕವಾಗಿಯೂ ಸವಾಲಿನ ಕಾರ್ಯವಾಗಿತ್ತು. ಎಂಜಿನಿಯರಿಂಗ್‌ ಕೌಶಲದಿಂದ ಈ ಯೋಜನೆಯನ್ನು ಕೈಗೊಳ್ಳಲಾಯಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.