ADVERTISEMENT

ಇದೇ 11ಕ್ಕೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:52 IST
Last Updated 5 ಜುಲೈ 2022, 19:52 IST

ಬೆಂಗಳೂರು: ‘ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರವು ಸ್ಪಂದಿಸದಿರುವುದನ್ನು ಖಂಡಿಸಿ ಇದೇ 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ರೈತ ಸಂಘ ತಿಳಿಸಿದೆ.

‘ಕಬ್ಬಿನ ಬೆಲೆ ನಿಗದಿಗೆ ಕೇಂದ್ರ ಸರ್ಕಾರ ಶೇ 10 ರಷ್ಟು ಇಳುವರಿ ಆಧಾರ ವನ್ನು ಮಾನದಂಡವಾಗಿ ಇಟ್ಟುಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯ ಸರ್ಕಾರ ಇದುವರೆಗೂ ಕಬ್ಬು ನಿಯಂತ್ರಣಾ ಸಮಿತಿ ಸಭೆ ನಡೆಸಿಲ್ಲ. ಎಸ್‌ಎಪಿ ಬೆಂಬಲ ಬೆಲೆಯನ್ನು ಘೋಷಿಸಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಎಫ್‌ಆರ್‌ಪಿಗಿಂತ ಕಡಿಮೆ ಬೆಲೆಗೆ ಕಬ್ಬು ಖರೀದಿಸುತ್ತಿದ್ದಾರೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.

‘ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಪೂರೈಸಲು ಹಿಂದಿನ ಸರ್ಕಾರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ ಬಡವರ ಮನೆಗಳಿಗೆ ಬೆಳಕು ನೀಡಿದ್ದವು. ಆದರೆ ಈಗಿನ ಸರ್ಕಾರ ಎಲ್ಲರ ಮನೆಗೂ ಬೆಳಕು ಎಂಬ ಜಾಹೀರಾತು ನೀಡಿ, ಹೆಚ್ಚು ಯೂನಿಟ್‌ ಬಳಕೆಯಾಗಿದೆ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸಚಿವ ಸಂಪುಟದ ತೀರ್ಮಾ ನದಂತೆ ಸರ್ಕಾರ ಕಾಫಿ ಬೆಳೆ ಗಾರರ ಪಂಪ್‌ಸೆಟ್‌ಗಳಿಗೆ ಇದುವರೆಗೂ ಉಚಿತ ವಿದ್ಯುತ್ ಸಂಪರ್ಕ ನೀಡಿಲ್ಲ. ಕೇಂದ್ರ ಸರ್ಕಾರ ಪ್ಯಾಕಿಂಗ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸುವ ತೀರ್ಮಾನ ಅವೈಜ್ಞಾನಿಕವಾಗಿದೆ. ಇವೆಲ್ಲ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಜುಲೈ 11ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.